ಶ್ರೀನಗರ್, ಜು 08 (DaijiworldNews/SM): ಹಿಂದೂಗಳ ಪವಿತ್ರ ಯಾತ್ರಾ ಸ್ಥಳವಾಗಿರುವ ಅಮರನಾಥ ಮಂದಿರ ಇರುವ ಗುಹೆ ಬಳಿ ಮೇಘ ಸ್ಫೋಟ ಸಂಭವಿಸಿದೆ. ಹತ್ತು ಮಂದಿ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ.
40ಕ್ಕೂ ಹೆಚ್ಚು ಮಂದಿ ಕಾಣೆಯಾಗಿರುವುದು ತಿಳಿದುಬಂದಿದೆ. ಇದರಿಂದಾಗಿ ಎರಡು ವರ್ಷಗಳ ಹಿಂದೆ ಆರಂಭವಾದ ಅಮರನಾಥ ಯಾತ್ರೆಯನ್ನು ಮತ್ತೊಮ್ಮೆ ಸ್ಥಗಿತಗೊಳಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿರುವ ಅಮರನಾಥದಲ್ಲಿ ಶುಕ್ರವಾರ ಸಂಜೆ 5:30ಕ್ಕೆ ಈ ದುರಂತ ಸಂಭವಿಸಿದೆ. ಯಾತ್ರೆಯ ಹಾದಿಯುದ್ಧಕ್ಕೂ ಇದ್ದ ಅನೇಕ ಸಾಮುದಾಯಿಕ ಅಡುಗೆಗೃಹಗಳು ಮತ್ತು ಡೇರೆಗಳು ಹಾನಿಯಾಗಿವೆ.
ಗಾಯಾಳುಗಳ ರಕ್ಷಣಾ ಕಾರ್ಯ ಮುಂದುವರೆಸಲಾಗಿದೆ. ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡಗಳು ಹಾಗೂ ಇತರೆ ಸಂಸ್ಥೆಗಳು ರಕ್ಷಣಾ ಕಾರ್ಯಾಚರಣೆ ಕೈಗೊಂಡಿವೆ. ಪ್ರಾಥಮಿಕ ಮಾಹಿತಿ ಪ್ರಕಾರ 10 ಮಂದಿ ಮೇಘ ಸ್ಫೋಟ ಘಟನೆಯಲ್ಲಿ ಬಲಿಯಾಗಿರುವುದು ಮತ್ತು ಹಲವು ಮಂದಿ ನಾಪತ್ತೆಯಾಗಿರುವುದರ ಮಾಹಿತಿ ಸಿಕ್ಕಿದೆ.
"ಮಳೆ ಸುರಿಯುವುದು ಮುಂದುವರಿದಿದೆಯಾದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಇಡೀ ಪ್ರದೇಶ ಜಲಾವೃತವಾಗಿದ್ದು ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ವಾತಾವರಣ ಸಹಜ ಸ್ಥಿತಿಗೆ ಬಂದ ಬಳಿಕ ತಾತ್ಕಾಲಿಕ ವ್ಯವಸ್ಥೆಯನ್ನು ಅಣಿಗೊಳಿಸಿ, ನಾಳೆ ಶನಿವಾರ ಯಾತ್ರೆಯನ್ನು ಮರುಚಾಲನೆಗೊಳಿಸಲಾಗುವುದು" ಎಂದು ರಕ್ಷಣಾ ಕಾರ್ಯದಲ್ಲಿರುವ ಇಂಡೋ ಟೆಬೆಟನ್ ಬಾರ್ಡರ್ ಪೊಲೀಸ್ ಪಡೆಯ ವಕ್ತಾರರು ಹೇಳಿದ್ದಾರೆ.