ನವದೆಹಲಿ, ಜು 08 (DaijiworldNews/DB): ಗುಂಡಿನ ದಾಳಿಗೊಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ಸೂಚಿಸಿದ್ದಾರೆ.
ಟೋಕಿಯೋದಲ್ಲಿ ಹಾಗೂ ಇತ್ತೀಚೆಗೆ ಕೊನೆ ಬಾರಿ ಶಿಂಜೋ ಅಬೆ ಅವರನ್ನು ಭೇಟಿಯಾಗಿದ್ದ ಫೋಟೋವೊಂದನ್ನು ಟ್ವಿಟರ್ನಲ್ಲಿ ಶೇರ್ ಮಾಡಿರುವ ಮೋದಿ, ಅಬೆ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಶಿಂಜೋ ಅಧಿಕಾರಾವಧಿಯಲ್ಲಿ ಭಾರತ-ಜಪಾನ್ ನಡುವೆ ಸ್ನೇಹ ದೊಡ್ಡದಿತ್ತು. ಉತ್ತಮ ಬಾಂಧವ್ಯವೂ ಉಭಯ ರಾಷ್ಟ್ರಗಳ ನಡುವೆ ನೆಲೆಯಾಗಿತ್ತು ಎಂದು ಮೋದಿ ಬರೆದುಕೊಂಡಿದ್ದಾರೆ. ಶಿಂಜೋ ಅವರು ಯಾವಾಗಲೂ ಭಾರತ-ಜಪಾನ್ ನಡುವಿನ ಬಾಂಧವ್ಯ ಬಲಪಡಿಸುವ ನಿಟ್ಟಿನಲ್ಲಿ ಉತ್ಸುಕರಾಗಿದ್ದರು ಎಂದೂ ಮೋದಿ ಬರೆದುಕೊಂಡಿದ್ದಾರೆ.
ಅಬೆ ಅವರಿಗೆ 2021ರಲ್ಲಿ ಭಾರತದ ಪದ್ಮ ವಿಭೂಷಣ ಹಾಗೂ 2022ರಲ್ಲಿ ನೇತಾಜಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.