ಗುಂಟೂರು (ಆಂಧ್ರಪ್ರದೇಶ), ಜು 08 (DaijiworldNews/DB): ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಅವರ ತಾಯಿ ಮಗನ ಪಕ್ಷ ತೊರೆದು ಮಗಳು ಕಟ್ಟಿದ ನೂತನ ಪಕ್ಷಕ್ಕೆ ಸೇರುವುದಾಗಿ ಘೋಷಿಸಿದ್ದಾರೆ.
ಆಡಳಿತರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷದಲ್ಲಿ ಗೌರವಾಧ್ಯಕ್ಷೆಯಾಗಿದ್ದ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ್ ರೆಡ್ಡಿ ಅವರ ತಾಯಿ ವೈ.ಎಸ್.ವಿಜಯಮ್ಮ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಗುಂಟೂರು ಜಿಲ್ಲೆಯ ಚಿನಕಾಕಣಿಯಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಅವರು ಈ ವಿಚಾರ ತಿಳಿಸಿದ್ದಾರೆ. ಅಲ್ಲದೆ, ಮಗಳು ಶರ್ಮಿಳಾ ಸ್ಥಾಪಿಸಿರುವ ಹೊಸ ಪಕ್ಷದ ಜೊತೆ ತೊಡಗಿಸಿಕೊಳ್ಳುವುದಾಗಿ ಹೇಳಿದ್ದಾರೆ.
ದಿ. ವೈ.ಎಸ್. ರಾಜಶೇಖರ ರೆಡ್ಡಿ ಅವರ ಪತ್ನಿಯಾಗಿ ಮತ್ತು ಶರ್ಮಿಳಾ ತಾಯಿಯಾಗಿ ಹೊಸ ಪಕ್ಷದೊಂದಿಗೆ ಕೆಲಸ ಮಾಡುವುದು ನನಗೆ ಅಗತ್ಯವಾಗಿದೆ. ಯಾರಿಗೂ ನನ್ನಿಂದ ಅಭ್ಯಂತರಗಳಾಗಬಾರದು ಎಂಬ ಕಾರಣಕ್ಕೆ ರಾಜೀನಾಮೆಗೆ ನಿರ್ಧರಿಸಿದ್ದೇನೆ ಎಂದಿದ್ದಾರೆ.
ಜಗನ್ ಮತ್ತು ಶರ್ಮಿಳಾ ಪ್ರತ್ಯೇಕ ಪಕ್ಷಗಳಲ್ಲಿರುವ ಅನಿವಾರ್ಯತೆ ಯಾಕೆ ಸೃಷ್ಟಿಯಾಯಿತೆಂಬುದು ಆ ದೇವರಿಗೇ ಗೊತ್ತು. ಜಗನ್ ಕಷ್ಟದಲ್ಲಿದ್ದಾಗ ಆತನ ಜೊತೆಗಿದ್ದೆ. ಈಗ ಆತ ಸಂತೋಷವಾಗಿದ್ದಾನೆ. ಈ ವೇಳೆ ಮಗಳಿಗೆ ಅನ್ಯಾಯ ಆಗಬಾರದೆಂದು ಮಗಳ ಜೊತೆಗಿದ್ದೇನೆ ಎಂದು ವಿಜಯಮ್ಮ ಹೇಳಿದ್ದಾರೆ.