ಹೈದರಾಬಾದ್, ಜು 08 (DaijiworldNews/DB): ಕೋವಿಡ್-19 ಲಸಿಕೆ ತಯಾರಕಾ ಭಾರತ್ ಬಯೋಟೆಕ್ನ ಘಟಕದಲ್ಲಿ ಶುಕ್ರವಾರ ಮುಂಜಾನೆ ವೇಳೆಗೆ ಬೆಂಕಿ ಅವಘಡ ಸಂಭವಿಸಿದೆ. ಅವಘಡದಿಂದಾಗಿ ಅಡುಗೆ ಕೋಣೆ ಸಂಪೂರ್ಣ ಹಾನಿಯಾಗಿದೆ.
ನಗರದ ಹೊರವಲಯದ ಶಮೀರ್ಪೇಟೆ ಬಳಿಯ ಜಿನೋಮ್ ವ್ಯಾಲಿಯಲ್ಲಿರುವ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟಕದ ಮುಖ್ಯ ಕೇಂದ್ರವು ಅಡುಗೆ ಮನೆಯಿಂದ ಸುಮಾರು 300 ಮೀಟರ್ ದೂರದಲ್ಲಿತ್ತು. ಆದರೆ ಅದೃಷ್ಟವಶಾತ್ ಇಲ್ಲಿಗೆ ಬೆಂಕಿ ಹಬ್ಬಿಲ್ಲ. ಘಟನೆ ನಡೆದು ಗಂಟೆಯೊಳಗಾಗಿ ಬೆಂಕಿ ನಂದಿಸಲಾಗಿದೆ ಎಂದು ಶಮೀರ್ ಪೇಟ್ ಅಗ್ನಿಶಾಮಕ ಅಧಿಕಾರಿ ಸಿ.ಎಚ್.ಪೂರ್ಣ ಕುಮಾರ್ ತಿಳಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.
ಅವಘಡಕ್ಕೆ ಕಾರಣ ಗೊತ್ತಾಗಿಲ್ಲ. ಅನಿಲ ಸೋರಿಕೆಯಿಂದ ಬೆಂಕಿ ವ್ಯಾಪಿಸಿರಬಹುದು ಎಂಬ ಶಂಕೆ ಪ್ರಾಥಮಿಕ ತನಿಖೆ ವೇಳೆ ವ್ಯಕ್ತವಾಗಿದೆ.