ಬೆಂಗಳೂರು, ಜು 08 (DaijiworldNews/DB): ರಾಜ್ಯದಲ್ಲಿ ಮಳೆಯಿಂದಾಗಿ ಸಾಕಷ್ಟು ಹಾನಿ ಉಂಟಾಗಿದೆ. ಹಾನಿ ಪರಿಹಾರಕ್ಕಾಗಿ ಹೆಚ್ಚುವರಿ 55 ಕೋಟಿ ರೂ. ಪರಿಹಾರ ಮೊತ್ತವನ್ನು ಬಿಡುಗಡೆಗೊಳಿಸಲಾಗಿದೆ ಎಂದು ಕಂದಾಯ ಸಚಿವ ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷ ಆರ್. ಅಶೋಕ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ರಾಜ್ಯದ ವಿವಿಧೆಡೆ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಮಾನವ, ಜಾನುವಾರುಗಳ ಜೀವಹಾನಿ, ಬೆಳೆನಾಶ, ಮನೆಗಳಿಗೆ ಹಾನಿ ಹಾಗೂ ಮೂಲ ಸೌಕರ್ಯಗಳಿಗೂ ಹಾನಿ ಉಂಟಾಗಿದೆ. ಹಾನಿಗಳ ಪರಿಹಾರಕ್ಕಾಗಿ ಹೆಚ್ಚುವರಿಯಾಗಿ 55 ಕೋಟಿ ರೂ.ಗಳನ್ನು ಕಂದಾಯ ಇಲಾಖೆಯಿಂದ ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಖಾತೆಗೆ ಹಣ ಬಿಡುಗಡೆಗೊಳಿಸಲಾಗಿದ್ದು, ಇದನ್ನು ಮಳೆ ಹಾನಿ ಪರಿಹಾರ ಕಾರ್ಯಕ್ಕೆ ಬಿಡುಗಡೆಗೊಳಿಸಲು ಸೂಚಿಸಲಾಗಿದೆ ಎಂದರು.
ಈಗಾಗಲೇ 680.59 ಕೋಟಿ ರೂ. ಹಣ ಜಿಲ್ಲಾಧಿಕಾರಿಗಳ ಖಾತೆಯಲ್ಲಿದೆ. ಇದೀಗ ಹೆಚ್ಚುವರಿ ಹಣ ಬಿಡುಗಡೆ ಮಾಡಲಾಗಿದ್ದು, ಒಟ್ಟು 735.59 ಕೋಟಿ ರೂ. ಹಣ ರಾಜ್ಯದ ಜಿಲ್ಲಾಧಿಕಾರಿಗಳ ಖಾತೆಯಲ್ಲಿದೆ ಎಂದವರು ತಿಳಿಸಿದರು.