ನವದೆಹಲಿ, ಜು 08 (DaijiworldNews/DB): ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿವುದಾದರೆ ಬಹಿರಂಗವಾಗಿಯೇ ಭೇಟಿ ಮಾಡುತ್ತೇನೆ. ವದಂತಿಗಳಿಗೆ ಅವಕಾಶ ಕೊಡುವುದಿಲ್ಲ ಎಂದು ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಆನಂದ್ ಶರ್ಮ ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ತಾವು ಭೇಟಿ ಮಾಡಿರುವ ವದಂತಿಗಳನ್ನು ತಳ್ಳಿಹಾಕಿರುವ ಅವರು, ನಾನೂ, ನಡ್ಡಾ ಇಬ್ಬರೂ ಹಿಮಾಚಲ ಪ್ರದೇಶದವರು. ಒಂದೇ ವಿವಿಯಲ್ಲಿ ಓದಿದ್ದೇವೆ. ಹಳೆಯ ಸಾಮಾಜಿಕ ಮತ್ತು ಕೌಟುಂಬಿಕ ನಂಟು ನಮಗಿಬ್ಬರಿಗೂ ಇದೆ. ಸೈದ್ದಾಂತಿಕ ಭಿನ್ನಾಭಿಪ್ರಾಯಗಳೇನೇ ಇದ್ದರೂ ನಮ್ಮ ನಡುವೆ ವೈಯಕ್ತಿಕ ದ್ವೇಷವಿಲ್ಲ. ಅವರನ್ನು ಭೇಟಿ ಮಾಡುವುದು ನನ್ನ ಹಕ್ಕು ಹಾಗೂ ಭೇಟಿ ಮಾಡುವುದಾದರೆ ಬಹಿರಂಗವಾಗಿಯೇ ಹೋಗುತ್ತೇನೆ ಎಂದರು.
ನನ್ನ ರಾಜ್ಯದವರೇ ಆದ ಮತ್ತು ಒಂದೇ ವಿವಿಯಲ್ಲಿ ಓದಿದ ಜೆ.ಪಿ. ನಡ್ಡಾ ಅವರು ಆಡಳಿತರೂಢ ಪಕ್ಷದ ರಾಷ್ಟ್ರಾಧ್ಯಕ್ಷರಾಗಿರುವುದು ನನಗೂ ಹೆಮ್ಮೆಯ ವಿಷಯವಾಗಿದೆ. ಹಿಮಾಚಲ ಪ್ರದೇಶ ವಿವಿ ಹಳೆ ವಿದ್ಯಾರ್ಥಿ ಸಂಘ ನನ್ನನ್ನು ಮತ್ತು ನಡ್ಡಾರನ್ನು ಸನ್ಮಾನಕ್ಕಾಗಿ ಇತ್ತೀಚೆಗೆ ಆಹ್ವಾನಿಸಿತ್ತು. ಇದರಲ್ಲಿ ಭಾಗವಹಿಸುವ ಸಂಬಂಧ ನಾಣು ನಡ್ಡಾರೊಂದಿಗೆ ಫೋನ್ ಮೂಲಕ ಮಾತನಾಡಿದ್ದೆ ಎಂದವರು ಇದೇ ವೇಳೆ ತಿಳಿಸಿದರು.
ಕಾಂಗ್ರೆಸ್ ನಾಯಕತ್ವದ ಬಗ್ಗೆ ಧ್ವನಿ ಎತ್ತಿದ್ದ ಜಿ-23 ನಾಯಕರ ಪೈಕಿ ಆನಂದ್ ಶರ್ಮಾ ಕೂಡಾ ಒಬ್ಬರು.