ನೈನಿತಾಲ್, ಜು 08 (DaijiworldNews/DB): ಉತ್ತರಾಖಂಡ್ ರಾಜ್ಯದ ನೈನಿತಾಲ್ ಜಿಲ್ಲೆಯ ರಾಮನಗರ ಎಂಬಲ್ಲಿ ಕಾರು ನದಿಗೆ ಉರುಳಿ ಬಿದ್ದು ಒಂಬತ್ತು ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ.
ಸಾವನ್ನಪ್ಪಿದವರೆಲ್ಲರೂ ಪಂಜಾಬ್ ಮೂಲದವರು ಎನ್ನಲಾಗಿದೆ. ಇವರೆಲ್ಲ ಎರ್ಟಿಗಾ ಕಾರಿನಲ್ಲಿ ಮುಂಜಾನೆ ಐದು ಗಂಟೆ ಸುಮಾರಿಗೆ ಕಾರ್ಬೆಟ್ ಕಡೆಗೆ ಹೋಗುತ್ತಿದ್ದರು. ಒಟ್ಟು 11 ಮಂದಿ ಪ್ರಯಾಣಿಸುತ್ತಿದ್ದರು. ರಾಮನಗರ ಕೋಟ್ದ್ವಾರ ರಸ್ತೆಯಲ್ಲಿರುವ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಧೇಲಾ ವಲಯದಲ್ಲಿ ಅಪಘಾತ ಸಂಭವಿಸಿದೆ. ಈ ವೇಳೆ ಇಬ್ಬರನ್ನು ರಕ್ಷಿಸಲಾಗಿದ್ದು, ಉಳಿದ ಒಂಬತ್ತು ಮಂದಿ ಅಸುನೀಗಿದ್ದಾರೆ.ಸ್ಥಳೀಯಾಡಳಿತ ದೃಢಪಡಿಸಿದೆ.
ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ವೇಗವಾಗಿ ಬಂದ ಕಾರು ಏಕಾಏಕಿ ಧೇಲಾ ಗ್ರಾಮದ ನದಿಗೆ ಬಿದ್ದು ಪ್ರವಾಹದಲ್ಲಿ ಕೊಚ್ಚಿ ಹೋಗಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಉತ್ತರಾಖಂಡ ಪೊಲೀಸರು, ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್), ಮತ್ತು ಅಗ್ನಿಶಾಮಕ ತಂಡವು ಸ್ಥಳಕ್ಕೆ ಧಾವಿಸಿದೆ.