ಚೆನ್ನೈ, ಜು 07 (DaijiworldNews/DB): ಕಾಳಿ ದೇವಿಯನ್ನು ಆಕ್ಷೇಪಾರ್ಹ ರೀತಿಯಲ್ಲಿ ಚಿತ್ರಿಸಿ ವಿವಾದಕ್ಕೆ ಗುರಿಯಾಗಿರುವ 'ಕಾಳಿ' ಸಾಕ್ಷ್ಯಚಿತ್ರದ ನಿರ್ದೇಶಕಿ ಲೀನಾ ಮಣಿಮೇಕಲೈ ಅವರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಹಿಂದೂ ಕಾರ್ಯಕರ್ತೆಯೊಬ್ಬರನ್ನು ಕೊಯಮತ್ತೂರಿನ ಸೆಲ್ವಪುರಂ ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದಾರೆ.
ಬಂಧಿತ ಮಹಿಳೆಯನ್ನು ಅತಿರಾಧಿ ಸರಸ್ವತಿ ಎಂದು ಗುರುತಿಸಲಾಗಿದೆ. ಈಕೆ ಷಷ್ಠಿ ಸೇನಾ ಹಿಂದೂ ಮಕ್ಕಳ್ ಇಯಕಂ ಸಂಘಟನೆಯ ಸದಸ್ಯೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294ಬಿ (ಅಶ್ಲೀಲ ಕೃತ್ಯಗಳು ಮತ್ತು ಹಾಡುಗಳು) ಮತ್ತು 506(1) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಅತಿರಾಧಿ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇವರು ಲೀನಾ ಅವರಿಗೆ ಬೆದರಿಕೆ ಹಾಕುತ್ತಿರುವ ವೀಡಿಯೋವೊಂದು ಸೆಲ್ವಪುರಂ ಸಬ್ ಇನ್ಸ್ಪೆಕ್ಟರ್ ಸೆಲ್ವಕುಮಾರ್ ಅವರಿಗೆ ಲಭಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆಂಬುದಾಗಿ ವರದಿಯಾಗಿದೆ.
ಈಕೆ ಬೆದರಿಕೆ ಹಾಕುತ್ತಿರುವ ವೀಡಿಯೋವು ಮಂಗಳವಾ ಎಲ್ಲಾ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ಹೀಗಾಗಿ ತಿರುಪ್ಪೂರ್ ಜಿಲ್ಲೆಯಲ್ಲಿ ಆಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.