ಬೆಂಗಳೂರು, ಜು 07 (DaijiworldNews/DB): ಶಿವಮೊಗ್ಗದಲ್ಲಿ ಫೆಬ್ರವರಿಯಲ್ಲಿ ಹತ್ಯೆಯಾಗಿದ್ದ ಹರ್ಷನ ಸಹೋದರಿ ಅಶ್ವಿನಿ ಜತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಏರುಧ್ವನಿಯಲ್ಲಿ ಮಾತನಾಡಿ ಕಳುಹಿಸಿದ ಘಟನೆ ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ನಡೆದಿದೆ.
ಹರ್ಷ ಹತ್ಯೆ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಜೈಲಿನಲ್ಲೇ ರಾಜಾತಿಥ್ಯ ಪಡೆಯುತ್ತಿರುವುದರ ವಿರುದ್ದ ದೂರು ನೀಡಲು ಅಶ್ವಿನಿ ಅವರು ಗೃಹ ಸಚಿವರ ಬಳಿ ತೆರಳಿದ್ದರು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವಂತೆ ಈ ವೇಳೆ ಅಶ್ವಿನಿ ಗೃಹ ಸಚಿವರಲ್ಲಿ ಕೇಳಿಕೊಂಡಿದ್ದಾರೆ. ಆದರೆ, ಈ ವೇಳೆ ಗೃಹ ಸಚಿವರು ಅಶ್ವಿನಿ ಜತೆ ಏರುಧ್ವನಿಯಲ್ಲಿ ಮಾತನಾಡಿ ಕಳುಹಿಸಿದ್ದಾರೆ.
ಗೃಹ ಸಚಿವರೊಂದಿಗೆ ನ್ಯಾಯ ಕೇಳಲು ಸಮಯ ಕೇಳಿ ತೆರಳಿದ್ದೆ. ಆದರೆ ಅದೇ ತಪ್ಪು ಎಂಬಂತೆ ಮಾತನಾಡಿದರು. ಸರ್ಕಾರದ ಮೇಲೆ ನಂಬಿಕೆಯೇ ಹೊರಟು ಹೋಗಿದೆ. ನ್ಯಾಯ ಸಿಗುವ ನಂಬಿಕೆ ನನಗಿಲ್ಲ ಎಂದು ಮಾಧ್ಯಮಗಳಿಗೆ ಅಶ್ವಿನಿ ಈ ವೇಳೆ ಬೇಸರದಿಂದ ಪ್ರತಿಕ್ರಿಯಿಸಿದರು.