ಜಲಂಧರ್ (ಪಂಜಾಬ್), ಜು 07 (DaijiworldNews/DB): ಭಗವಾನ್ ವಾಲ್ಮೀಕಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಪಂಜಾಬಿ ನಟ ರಾಣಾ ಜಂಗ್ ಬಹದ್ದೂರ್ ಅವರನ್ನು ಜಲಂಧರ್ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಭಗವಾನ್ ವಾಲ್ಮೀಕಿ ಬಗ್ಗೆ ರಾಣಾ ಜಂಗ್ ಆಕ್ಷೇಪಾರ್ಹವಾಗಿ ಮಾತನಾಡಿದ್ದರು. ಇದರಿಂದ ಆಕ್ರೋಶಗೊಂಡ ಜನ ಜಲಂಧರ್ನಲ್ಲಿ ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಧಾರ್ಮಿಕ ಭಾವನೆಗಳಿಗೆ ಘಾಸಿಗೊಳಿಸಲಾಗಿದೆ ಎಂದು ನಟನ ವಿರುದ್ದ ಜಲಂಧರ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಪೊಲೀಸರು ನಟನನ್ನು ಬಂಧಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 295ರ ಅಡಿಯಲ್ಲಿ ಪ್ರಕರಣ ದಾಖಲಿಸಿ ರಾಣಾನನ್ನು ಬಂಧಿಸಲಾಗಿದೆ ಎಂದು ಜಲಂಧರ್ ಉಪ ಪೊಲೀಸ್ (ಡಿಸಿಪಿ) ಜಸ್ಕಿರಂಜಿತ್ ಸಿಂಗ್ ತೇಜಾ ತಿಳಿಸಿದ್ದಾರೆ.
ಇದೇ ವೇಳೆ ರಾಣಾ ಕ್ಷಮೆ ಯಾಚಿಸಿದ್ದು, ನನ್ನ ಹೇಳಿಕೆಗಳು ತಪ್ಪಾಗಿದ್ದಲ್ಲಿ ಜನರಲ್ಲಿ ಕ್ಷಮೆ ಕೋರುತ್ತೇನೆ. ನಾನು ಚಿಕ್ಕವನು, ಸಮಾಜ ದೊಡ್ಡದು. ಯಾವುದೇ ರಾಜಕೀಯ ಪಕ್ಷಗಳಿಗೂ ನನಗೂ ಸಂಬಂಧವಿಲ್ಲ. ನಾನೊಬ್ಬ ನಟ ಅಷ್ಟೇ ಎಂದಿದ್ದಾರೆ.