ಬೆಂಗಳೂರು, ಜು 07 (DaijiworldNews/MS): ಕೈ ಪಕ್ಷ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದ್ದು ಇದರ ನಾಯಕ ಸಿದ್ದರಾಮಯ್ಯರದು ಸ್ಪ್ಲಿಟ್ ಪರ್ಸನಾಲಿಟಿ ಎಂದು ರಾಜ್ಯ ಬಿಜೆಪಿ ಘಟಕ ಕಾಂಗ್ರೆಸ್ ಪಕ್ಷದ ವಿರುದ್ದ ಕಿಡಿಕಾರಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿದ ಬಿಜೆಪಿ , ಸಿದ್ದರಾಮಯ್ಯರದು ಸ್ಪ್ಲಿಟ್ ಪರ್ಸನಾಲಿಟಿ. ಪಕ್ಷದ ಪ್ರಣಾಳಿಕೆಯಲ್ಲಿ ಭಾಗ್ಯಗಳ ಪುಂಗಿ ಊದಿ ಆಶ್ವಾಸನೆ ಕೊಟ್ಟ ಧನರಾಶಿಯೇ ಬೇರೆ, ಸಮ್ಮಿಶ್ರ ಸರ್ಕಾರದ ಬಜೆಟ್ಟಿನಲ್ಲಿ ಆ ಭಾಗ್ಯಗಳಿಗೆ ಘೋಷಿಸಿದ ಪುಡಿಗಾಸು ರಾವಣಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೇ ಸರಿ. ಇಷ್ಟೆಲ್ಲಾ ಹಳವಂಡಗಳ ಮೇಲೆ ಭಾಗ್ಯಗಳ ದುಡ್ಡನ್ನೂ ದೋಚಿದ್ದಾಯಿತು ಎಂದು ಆರೋಪಿಸಿದೆ.
ತಾನು ಬಹಳ ಸಚ್ಚಾರಿತ್ರ್ಯ ಹೊಂದಿದವರಂತೆ ಬಿಂಬಿಸಿಕೊಳ್ಳುವ ಬಾದಾಮಿ ಶಾಸಕ ಸಿದ್ದರಾಮಯ್ಯ ಭ್ರಷ್ಟಾಚಾರದ ಬಗ್ಗೆ ಪುಂಖಾನುಪುಂಖ ಮಾತನಾಡುತ್ತಿದ್ದಾರೆ. ಅವರೇ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ್ದೇನು? ತಮ್ಮ ಮೇಲಿದ್ದ 50 ಪ್ರಕರಣಗಳಿಂದ ಪಾರಾಗಲು ಲೋಕಾಯುಕ್ತವನ್ನೇ ಖತಂ ಮಾಡಿದ ಭೂಪ ಈ ಮಹರಾಯ! ತಾನು ಕಳ್ಳ, ಪರರ ನಂಬ ಎಂದು ಲೇವಡಿ ಮಾಡಿದೆ.
ಕೈಪಕ್ಷ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದೆ. ಪಕ್ಷದ ಅಧ್ಯಕ್ಷೆಯಿಂದ ಹಿಡಿದು ಚಾಮರಾಜಪೇಟೆಯ ಪುಢಾರಿ ಶಾಸಕನವರೆಗೂ ಸಾಲುಸಾಲಾಗಿ ಇ.ಡಿ. ಹಿಡಿತದಲ್ಲಿದ್ದಾರೆ. ಜಾಮೀನಿನ ಮೇಲೆ ಹೊರಬಂದು ಈಗ ಭ್ರಷ್ಟಾಚಾರದ ಬಗ್ಗೆ ಗಂಟಲು ಹರಿಯುವಂತೆ ಕೂಗುವುದು ಕೈಪಕ್ಷದ ಅಧೋಗತಿಯ ಸೂಚನೆ. ಪಾಪಿ ಸಮುದ್ರ ಹೊಕ್ಕರೂ ಮೊಳಕಾಲುದ್ದ ಮಾತ್ರ ನೀರು ಎಂದು ಹೇಳಿದೆ.
ಕೈಪಕ್ಷದ ರಾಜ್ಯಾಧ್ಯಕ್ಷರಿಗೆ ಭ್ರಷ್ಚಾಚಾರದ ವಿರುದ್ಧ ಮಾತಾಡೋ ನೈತಿಕ ಅರ್ಹತೆಯೇ ಇಲ್ಲ. 317 ಬ್ಯಾಂಕ್ ಖಾತೆಗಳ ಮೂಲಕ ಹವಾಲಾ ದಂಧೆ ಮಾಡಿರುವವರು, ಶಾಂತಿನಗರ ಗೃಹ ನಿರ್ಮಾಣ ಸೊಸೈಟಿಯ 1,456 ಕೋಟಿ ರೂ. ಮೊತ್ತದ ಆಸ್ತಿಗುಳುಂ ಮಾಡಿರುವವರು ಸುಭಗರಂತೆ ಬುಡಬುಡಿಕೆ ಮಾತುಗಳನ್ನಾಡುವುದು ಬದನೇಕಾಯಿ ತಿಂದು ವೇದಾಂತ ನುಡಿದಂತೆ ಎಂದು ಹೇಳಿದೆ.