ಮಂಡ್ಯ, ಜು 07 (DaijiworldNews/DB): ಶ್ರೀರಂಗಪಟ್ಟಣ ತಾಲೂಕಿನ ಗೆಂಡೆಹೊಸಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಮಕ್ಕಳೆದುರೇ ಪತ್ನಿಯನ್ನು ಕತ್ತು ಬಿಗಿದು ಕೊಲೆಗೈದ ಘಟನೆ ನಡೆದಿದೆ.
ಯೋಗಿತಾ (27) ಕೊಲೆಯಾದ ಮಹಿಳೆ. ರವಿ ಕೊಲೆ ಮಾಡಿದ ಪಾಪಿ ಪತಿ. ಪರಸ್ತ್ರೀಯೊಂದಿಗೆ ರವಿಗೆ ಇದ್ದ ಅನೈತಿಕ ಸಂಬಂಧದ ಬಗ್ಗೆ ಯೋಗಿತಾ ಪ್ರಶ್ನಿಸಿದ್ದರು. ಅಲ್ಲದೆ, ಈ ವಿಚಾರಕ್ಕೆ ದಂಪತಿ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ನ್ಯಾಯ ಪಂಚಾಯಿತಿ ನಡೆಸಿದರೂ ಗಲಾಟೆ ನಿಂತಿರಲಿಲ್ಲ. ನಿನ್ನೆ ರಾತ್ರಿ ದಂಪತಿ ಮಧ್ಯೆ ನಡೆದ ಗಲಾಟೆ ತಾರಕಕ್ಕೇರಿದ್ದ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿದೆ.
ಆರೋಪಿ ರವಿ ಮಕ್ಕಳಿಗೆ ಪಾನಿಪುರಿ ತಿನ್ನಿಸುತ್ತಿದ್ದ. ಈ ವೇಳೆ ಗಲಾಟೆ ನಡೆದಿದ್ದು, ಯೋಗಿತಾರಿಗೆ ಪತಿ ರವಿ ಥಳಿಸಿದ್ದಾನೆ. ಬಳಿಕ ಆಕೆಯನ್ನು ಕೋಣೆಯೊಳಗೆ ಎಳೆದಯ್ದಿದ್ದಾನೆ. ಕೂಡಲೇ ಮಕ್ಕಳು ಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಆದರೆ ಅವರು ಬರುವಷ್ಟರಲ್ಲಿ ಆತ ಪತ್ನಿಯನ್ನು ಕೊಲೆಗೂದಿದ್ದ. ಬಳಿಕ ಯಾರಿಗೂ ವಿಷಯ ತಿಳಿಸಬೇಡಿ ಎಂದು ಮಕ್ಕಳಲ್ಲಿ ಹೇಳಿ ರವಿ ಕಾಲ್ಕಿತ್ತಿದ್ದಾನೆ. ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.