ನವದೆಹಲಿ, ಜು 07 (DaijiworldNews/MS): ಸಿಗರೇಟ್ ಸೇದುತ್ತಿರುವಂತೆ ಚಿತ್ರಿಸಿರುವ ಕಾಳಿ ಚಿತ್ರದ ಪೋಸ್ಟರ್ನ ಮೇಲೆ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಇದನ್ನು ಸಮರ್ಥಿಸುವಂತೆ ಮತ್ತೊಂದು ಟ್ವೀಟ್ ಮಾಡಿದ್ದು, ಇದು ವಿವಾದದ ಕಿಡಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.
ಕಾಳಿ ದೇವಿಯು ಧೂಮಪಾನ ಮಾಡುತ್ತಿರುವುದನ್ನು ಮತ್ತು LGBTQ ಹೆಮ್ಮೆಯ ಧ್ವಜವನ್ನು ಹಿಡಿದಿರುವುದನ್ನು ತೋರಿಸುವ ಪೋಸ್ಟರ್ ಕುರಿತು ಧಾರ್ಮಿಕ ನಿಂದನೆ ಆರೋಪ ವ್ಯಕ್ತವಾಗಿ ಹಲವು ಎಫ್ಐಆರ್ಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಲೀನಾ ತನ್ನ ರಕ್ಷಣೆಗಾಗಿ ಹೊಸ ಟ್ವೀಟ್ವೊಂದನ್ನು ಮಾಡಿದ್ದಾರೆ.
ಗುರುವಾರ, ಮಣಿಮೇಕಲೈ ಅವರು ಶಿವ ಮತ್ತು ಪಾರ್ವತಿ ವೇಷಭೂಷಣಗಳನ್ನು ಧರಿಸಿರುವ ಇಬ್ಬರು ಧೂಮಪಾನ ಮಾಡುತ್ತಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಅವರು ಫೋಟೋಗೆ "ಎಲ್ಲೆಡೆ" ಎಂದು ಸಂಕ್ಷಿಪ್ತವಾಗಿ ಶೀರ್ಷಿಕೆ ನೀಡಿದ್ದಾರೆ. ಕಾಳಿಯ ಪೋಸ್ಟರ್ನಲ್ಲಿರುವ ವಿವಾದಾತ್ಮಕ ಚಿತ್ರಕ್ಕೂ ಫೋಟೋಕ್ಕೂ ಸಾಮ್ಯತೆ ಇದೆ.
ಕಾಳಿ ಚಿತ್ರದ ಪೋಸ್ಟರ್ನ ಮೇಲೆ ಆಕ್ರೋಶ ಹಾಗೂ ವಿರೋಧ ಕೇಳಿಬಂದ ಹಿನ್ನಲೆಯಲ್ಲಿ ಕೆನಡಾದ ಅಗಾ ಖಾನ್ ಮ್ಯೂಸಿಯಂ ಸಾಕ್ಷ್ಯಚಿತ್ರದ ಪ್ರಸ್ತುತಿಯನ್ನು ತೆಗೆದುಹಾಕಿ ಕ್ಷಮೆಯಾಚಿಸಿದೆ.
ಈ ಸೊದ ಟ್ವೀಟ್ ಮತ್ತೆ ವಿವಾದ ಹುಟ್ಟಿಹಾಕಿದ್ದು, "ಲೀನಾ ದ್ವೇಷವನ್ನು ಹರಡುತ್ತಿದ್ದಾರೆ , ಧರ್ಮದ ಅವಹೇಳನ ನಿಲ್ಲಿಸಿ" ಎಂದು ಹಲವು ಟ್ವಿಟರ್ ಬಳೆಕೆದಾರರು ಟ್ವೀಟ್ ಮಾಡಿದ್ದಾರೆ.