ಕೇರಳ, ಜು 06 (DaijiworldNews/DB): ಇಡುಕ್ಕಿ ಜಿಲ್ಲೆಯ ಮರಯೂರ್ ಪ್ರದೇಶದಲ್ಲಿ ಗಜಪ್ರಸವಕ್ಕಾಗಿ ರಸ್ತೆ ಸಂಚಾರವನ್ನೇ ಒಂದು ಗಂಟೆ ಕಾಲ ತಡೆ ಹಿಡಿದ ಪ್ರಸಂಗ ನಡೆದಿದೆ. ಪ್ರಸವದ ಬಳಿಕ ಆನೆ ಮತ್ತು ಮರಿ ಕಾಡು ಪ್ರವೇಶ ಮಾಡಿದ ನಂತರವೇ ಸಂಚಾರಕ್ಕೆ ಅನುವು ಮಾಡಲಾಯಿತು.
ತಮಿಳುನಾಡು ಮತ್ತು ಕೇರಳ ನಡುವಿನ ಇಡುಕ್ಕಿ ಜಿಲ್ಲೆಯ ಮರಯೂರ್ ಪ್ರದೇಶದ ರಸ್ತೆ ಮಧ್ಯೆ ಇಂದು ಬೆಳಗ್ಗೆ ಆನೆಯೊಂದು ಹೆರಿಗೆಗೆ ತಯಾರಾಗಿತ್ತು. ರಸ್ತೆ ಮಧ್ಯೆ ಹೆರಿಗೆಗಾಗಿ ನಿಂತಿರುವ ಆನೆಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುವ ಸಲುವಾಗಿ ಅರಣ್ಯಾಧಿಕಾರಿಗಳು ಎರಡೂ ಕಡೆಯಿಂದ ಸಂಚಾರ ನಿರ್ಬಂಧಿಸಿದರು. ಹೀಗಾಗಿ ಸುಮಾರು ಒಂದು ತಾಸು ಕಾಲ ಸಂಚಾರವನ್ನು ನಿರ್ಬಂಧಿಸಲಾಗಿತ್ತು.
ಆನೆಯ ಸುಖ ಪ್ರಸವದ ಬಳಿಕ ತಾಯಿ ಆನೆ ಮತ್ತು ಮರಿ ಆನೆ ಕಾಡನ್ನು ಪ್ರವೇಶಿಸಿದರು. ಆನೆ ಕಾಡು ಪ್ರವೇಶಿಸಿದ ಬಳಿಕ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು ಎಂದು ಅರಣ್ಯ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.