ನವದೆಹಲಿ, ಜು 06 (DaijiworldNews/MS): ತೀವ್ರ ವಿವಾದ ಹುಟ್ಟು ಹಾಕಿದ್ದ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದ 'ಕಾಳಿ' ದೇವತೆ ಪೋಸ್ಟರ್ ಗೆ ಸಂಬಂಧಿಸಿದಂತೆ ಕೆನಡಾದ ಅಗಾ ಖಾನ್ ವಸ್ತುಸಂಗ್ರಹಾಲಯವು ಹಿಂದೂ ಮತ್ತು ಇತರ ಸಮುದಾಯಗಳ ಕ್ಷಮೆ ಕೋರಿದೆ.
ಒಟ್ಟಾವಾದಲ್ಲಿನ ಭಾರತೀಯ ಹೈಕಮಿಷನ್ ವಿವಾದಾತ್ಮಕ ಪೋಸ್ಟರ್ ತೆಗೆದುಹಾಕುವಂತೆ ಕೆನಡಾದ ಅಧಿಕಾರಿಗಳಿಗೆ ಸೂಚಿಸಿದ ನಂತರ, ಅಗಾ ಖಾನ್ ಮ್ಯೂಸಿಯಂ 'ಕಾಲಿ' ಸಾಕ್ಷ್ಯಚಿತ್ರದ ಪ್ರಸ್ತುತಿಯನ್ನು ತೆಗೆದುಹಾಕಿದೆ ಮತ್ತು ಕ್ಷಮೆಯಾಚಿಸಿ ಟ್ವೀಟ್ ಮಾಡಿದೆ.
ನಿರ್ಮಾಪಕಿ ಲೀನಾ ಮಣಿಮೇಕಲೈ ಕೆನಡಾ ಫಿಲ್ಮ್ಸ್ ಫೆಸ್ಟಿವಲ್ (ರಿದಮ್ಸ್ ಆಫ್ ಕೆನಡಾ) ನಲ್ಲಿ ಕಾಳಿ' ಹೆಸರಿನ ಸಾಕ್ಷ್ಯಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ವಿವಾದವನ್ನು ಹುಟ್ಟುಹಾಕಿತ್ತು. ಈ ಪೋಸ್ಟರ್ ನಲ್ಲಿ ಕಾಳಿ ದೇವಿ ಸಿಗರೇಟ್ ಸೇದುತ್ತಿರುವ ಮತ್ತು ಕೈಯಲ್ಲಿ ಲೈಂಗಿಕ ಅಲ್ಪ ಸಂಖ್ಯಾತರ ಧ್ವಜ ಹಿಡಿದಿರುವಂತೆ ಚಿತ್ರಿಸಲಾಗಿದೆ.ಈ ಪೋಸ್ಟರ್ ಹಾಗೂ ಲೀನಾ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಹಿಂದೂ ಧರ್ಮ ಮತ್ತು ಇತರ ಸಮುದಾಯಗಳ ನಂಬಿಕೆಗೆ ಧಕ್ಕೆ ತಂದಿದ್ದಕ್ಕೆ ತೀವ್ರ ವಿಷಾದವಿದೆ. 'ಅಂಡರ್ ದಿ ಟೆಂಟ್'ನ 18 ವಿಡಿಯೊಗಳಲ್ಲಿ ಒಂದಾಗಿರುವ 'ಕಾಳಿ' ಸಾಕ್ಷ್ಯಚಿತ್ರದ ಪೋಸ್ಟರ್ನಲ್ಲಿ ಕಾಳಿ ದೇವಿಯನ್ನು ತಪ್ಪಾಗಿ ಚಿತ್ರಿಸಿ ಹಿಂದೂ ಸಮುದಾಯಕ್ಕೆ ಘಾಸಿ ಮಾಡಿದೆ. ಈ ಬಗ್ಗೆ ಕ್ಷಮೆ ಕೋರುತ್ತೇವೆ ಎಂದು ಆಗಾ ಖಾನ್ ಮ್ಯೂಸಿಯಂ ಟ್ವೀಟ್ ಮಾಡಿದೆ.