ನವದೆಹಲಿ, ಜು 06 (DaijiworldNews/DB): ಪ್ರವಾದಿ ಮೊಹಮ್ಮದರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬಂಧಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ತುರ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ.
ಪ್ರವಾದಿ ಮೊಹಮ್ಮದರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ನೂಪುರ್ ಶರ್ಮಾ ಅವರನ್ನು ಮುಸ್ಲಿಮರ ಮನಸ್ಸಿಗೆ ನೋವುಂಟು ಮಾಡಿದ್ದಾರೆ. ಅವರ ವಿರುದ್ದ ತತ್ಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಬಂಧಿಸಬೇಕು ಎಂಬುದಾಗಿ ಅಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿ ಸಲ್ಲಿಕೆಯಾಗಿದ್ದು, ಈ ಅರ್ಜಿಯನ್ನು ತುರ್ತು ವಿಚಾರಣೆ ನಡೆಸುವಂತೆ ನ್ಯಾಯವಾದಿ ಅಬು ಸೋಹೆಲ್ ಕೋರಿದ್ದರು. ಆದರೆ ಅರ್ಜಿಯ ತುರ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿತು.
ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಜೆ.ಕೆ.ಮಹೇಶ್ವರಿ ಅವರ ರಜಾಕಾಲದ ಪೀಠವು ರಿಜಿಸ್ಟ್ರಾರ್ ಮುಂದೆ ವಿಚಾರ ಪ್ರಸ್ತಾಪಿಸುವಂತೆ ನ್ಯಾಯವಾದಿ ಅಬು ಸೋಹೆಲ್ ಅವರನ್ನು ಕೇಳಿತು. ದೂರು ನೀಡಿದರೂ ಶರ್ಮಾ ವಿರುದ್ದ ಈವರೆಗೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದಾಗಿ ಪ್ರಸ್ತಾಪಿಸಿದ ನ್ಯಾಯವಾದಿಗಳು, ಈ ಸಂಬಂಧ ತುರ್ತು ವಿಚಾರಣೆ ನಡೆಸಬೇಕು ಎಂದು ಕೋರಿದರು. ಸದ್ಯ ರಿಜಿಸ್ಟ್ರಾರ್ ಮುಂದೆ ವಿಚಾರ ಪ್ರಸ್ತಾಪ ಮಾಡಿದ್ದೇನೆ. ಜುಲೈ 11 ರಂದು ವಿಚಾರಣೆಗೆ ಬರುವ ಸಾಧ್ಯತೆಯಿದೆ ಎಂದು ನ್ಯಾಯವಾದಿ ಅಬು ಸಾಹೆಲ್ ಹೇಳಿದ್ದಾರೆ.