ಶಿವಮೊಗ್ಗ, ಜು 06 (DaijiworldNews/DB): ಕಾಂಗ್ರೆಸ್ ಪಕ್ಷಕ್ಕೂ ಸಿದ್ದರಾಮೋತ್ಸವಕ್ಕೂ ಸಂಬಂಧವಿಲ್ಲ ಎನ್ನುವ ಮೂಲಕ ಕಾಂಗ್ರೆಸ್ ಪಕ್ಷ ಒಡೆದು ಛಿದ್ರವಾಗಿದೆ ಎಂಬುದನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪರೋಕ್ಷವಾಗಿ ಹೇಳಿದ್ದಾರೆ. ದೊಡ್ಡಣ್ಣನ ಉತ್ಸವಕ್ಕೆ ಅಣ್ಣ ತಮ್ಮಂದಿರೇ ವಿರೋಧ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಅವರ ಮನೆಯ ದೊಡ್ಡಣ್ಣ ಸಿದ್ದರಾಮಯ್ಯ ಅವರ ಉತ್ಸವಕ್ಕೇ ಕಾಂಗ್ರೆಸ್ ಪಕ್ಷದೊಂದಿಗೆ ಸಂಬಂಧವಿಲ್ಲ ಎನ್ನುವ ಅವರು ಅದನ್ನು ಜನರ ಉತ್ಸವ ಎಂದು ಹೇಗೆ ಹೇಳುತ್ತಾರೆ ಎಂದು ಪ್ರಶ್ನಿಸಿದರು.
ಇದು ನಾನು ಹೇಳಿರುವುದಲ್ಲ, ಬೆಂಬಲಿಗರೇ ಮಾಡಿತ್ತಿರುವ ಉತ್ಸವ ಎಂಬುದಾಗಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಒಂದೆಡೆ ನಾನು ಮುಖ್ಯಮಂತ್ರಿ ಎಂದು ಘೋಷಣೆ ಕೂಗಬೇಡಿ ಎನ್ನುತ್ತಾರೆ, ಇನ್ನೊಂದೆಡೆ ಅದೇ ಘೋಷಣೆಯನ್ನು ಕೂಗಿಸಿಕೊಳ್ಳುತ್ತಾರೆ. ಡಿಕೆಶಿ ಅವರದ್ದೂ ಇದೇ ಸ್ಥಿತಿಯಾಗಿದೆ ಎಂದು ಅವರು ಲೇವಡಿ ಮಾಡಿದರು.
ತಮ್ಮ ಪಕ್ಷ ಜೀವಂತ ಇದೆ ಎಂದು ತೋರಿಸಿಕೊಳ್ಳಲು ಪಿಎಸ್ಐ ನೇಮಕಾತಿ ವಿಚಾರದಲ್ಲಿ ಸುಖಾಸುಮ್ಮನೆ ಕೂಗಾಡುವುದನ್ನು ಕಾಂಗ್ರೆಸ್ ಅಭ್ಯಾಸ ಮಾಡಿಕೊಂಡಿದೆ. ಆದರೆ ಅವರ ಸರ್ಕಾರ ಇದ್ದಾಗ ಯಾವುದಾದರೂ ಒಂದು ಅಕ್ರಮದ ಬಗ್ಗೆಯಾದರೂ ಅವರು ತನಿಖೆ ನಡೆಸಿದ್ದಾರಾ ಎಂದು ಪ್ರಶ್ನಿಸಿದರು.