ಬೆಂಗಳೂರು, ಜು 06 (DaijiworldNews/DB): ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಅವರು ಕೆಲವು ಪ್ರಭಾವಿ ಸಚಿವರ ಹೆಸರು ಬಹಿರಂಗಪಡಿಸಲು ಸಿದ್ದರಿದ್ದಾರೆ. ಆದರೆ ಅದನ್ನು ತನಿಖಾಧಿಕಾರಿಗಳು ದಾಖಲು ಮಾಡಿಕೊಳ್ಳುತ್ತಿಲ್ಲ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಭ್ರಷ್ಟಾಚಾರದ ರಾಜಧಾನಿ ಕರ್ನಾಟಕ ಎಂಬಂತಾಗಿದೆ. ಹಲವು ಪ್ರಭಾವಿ ಸಚಿವರು, ನಾಯಕರು, ಐಪಿಎಸ್ ಅಧಿಕಾರಿಗಳು ಈ ಅಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ ಅಮೃತ್ ಪೌಲ್ ಬಹಿರಂಗಪಡಿಸಲು ಸಿದ್ದರಿದ್ದಾರೆ. ಆದರೆ ಅದನ್ನು ತನಿಖಾಧಿಕಾರಿಗಳು ದಾಖಲು ಮಾಡಿಕೊಳ್ಳುತ್ತಿಲ್ಲ ಎಂದರು.
ಆಂತರಿಕವಾಗಿ ತನಿಖೆಯ ದಿಕ್ಕು ಬೇರೆಡೆಗೆ ಸಾಗುತ್ತಿದೆ. ಇದರಿಂದ ನ್ಯಾಯ ಸಿಗುವುದು ಅನುಮಾನ. ಹೈಕೋರ್ಟ್ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದವರು ಇದೇ ವೇಳೆ ಒತ್ತಾಯಿಸಿದರು.
ಸಿದ್ದರಾಮೋತ್ಸವದ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಅದು ಅವರ ವೈಯಕ್ತಿಕ ಕಾರ್ಯಕ್ರಮ. ನಾಯಕರು ಹುಟ್ಟುಹಬ್ಬ ಆಚರಿಸಿಕೊಳ್ಳುವುದು ತಪ್ಪಲ್ಲ ಎಂದರು.
ಆಗಸ್ಟ್ 15ರಂದು ದೇಶದ 75ನೇ ಸ್ವಾತಂತ್ರ್ಯೋತ್ಸವ ಆಚರಣೆ ಸಂದರ್ಭದಲ್ಲಿ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರು ನನಗೆ ಒಂದಷ್ಟು ಜವಾಬ್ದಾರಿಗಳನ್ನು ವಹಿಸಿದ್ದಾರೆ. ಅಂದು 75 ಸಾವಿರದಿಂದ 1 ಲಕ್ಷ ಕಾರ್ಯಕರ್ತರು ಬೆಂಗಳೂರಿನಲ್ಲಿ ಮೆರವಣಿಗೆ ನಡೆಸುವುದು, 75 ಕಿ.ಮೀ ಪಾದಯಾತ್ರೆ ನಡೆಯಲಿದೆ. ಎಲ್ಲಾ ಜಿಲ್ಲೆಗಳಲ್ಲೂ ಪಾದಯಾತ್ರೆ ಇರಲಿದ್ದು, ಇದಕ್ಕಾಗಿ ಗುರುವಾರ ಸಭೆ ನಡೆಯಲಿದೆ ಎಂದವರು ತಿಳಿಸಿದರು.