ನವದೆಹಲಿ, ಜು 06 (DaijiworldNews/DB): ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ನಾಳೆ ವಿವಾಹಬಂಧನಕ್ಕೊಳಗಾಗಲಿದ್ದಾರೆ. ಹೌದು. ಡಾ. ಗುರುಪ್ರೀತ್ ಕೌರ್ ಅವರನ್ನು ಮಾನ್ ವರಿಸಲಿದ್ದಾರೆ.
ಚಂಡೀಘಡದಲ್ಲಿ ಮಾನ್ ಮದುವೆ ನಡೆಯಲಿದೆ. ಇದು ತೀರಾ ಖಾಸಗಿ ಸಮಾರಂಭವಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ವಿವಿಧ ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಅಂದ ಹಾಗೆ ಇದು ಭಗವಂತ್ ಮಾನ್ ಅವರಿಗೆ ಎರಡನೇ ಮದುವೆಯಾಗಿದೆ. ಆರು ವರ್ಷಗಳ ಹಿಂದೆ ತಮ್ಮ ಮೊದಲ ಪತ್ನಿಗೆ ವಿಚ್ಚೇದನ ನೀಡಿದ ಬಳಿಕ ಭಗವಂತ್ ಮಾನ್ ಅವರು ಸಿಂಗಲ್ ಆಗಿದ್ದರು. ಇದೀಗ ಮತ್ತೆ ತಮ್ಮ ಬಾಳ ಸಂಗಾತಿಯನ್ನು ಹುಡುಕಿಕೊಂಡಿದ್ದು, ನಾಳೆ ಎರಡನೇ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಆದರೆ ಮಾನ್ ವರಿಸಲಿರುವ ಹುಡುಗಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಮಾನ್ ಅವರ ಮೊದಲ ಪತ್ನಿ ಇಬ್ಬರು ಮಕ್ಕಳೊಂದಿಗೆ ಯುನೈಟೆಡ್ ಸ್ಟೇಟ್ಸ್ನಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ.
ಆಮ್ ಆದ್ಮಿ ಪಕ್ಷದವರಾದ ಭಗವಂತ್ ಮಾನ್ ಅವರು ಕಳೆದ ಕೆಲ ತಿಂಗಳ ಹಿಂದಷ್ಟೇ ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಇದೀಗ ಅವರು ಮದುವೆಯ ಕಾರಣಕ್ಕಾಗಿ ಸುದ್ದಿಯಾಗಿದ್ದಾರೆ.