ಜೈಪುರ, ಜು 06 (DaijiworldNews/DB): ಪೊಲೀಸರು ಬಂಧಿಸುವುದಕ್ಕೆ ಮುನ್ನ ಪರಾರಿಯಾಗಲೆತ್ನಿಸಿದ್ದ ಉದಯಪುರ ಟೈಲರ್ ಕನ್ಹಯ್ಯ ಲಾಲ್ ಹಂತಕರನ್ನು ಜೈಪುರದ ಇಬ್ಬರು ಕೃಷಿಕರು ತಮ್ಮ ಜೀವವನ್ನೇ ಒತ್ತೆ ಇಟ್ಟು 35 ಕಿಮೀವರೆಗೆ ಬೆನ್ನಟ್ಟಿ ಸಾಹಸ ಮೆರೆದಿದ್ದರು ಎಂಬ ಸಂಗತಿ ಇದೀಗ ಗೊತ್ತಾಗಿದೆ. ಅವರ ಈ ಧೈರ್ಯಕ್ಕಾಗಿ ರಾಜಸ್ತಾನ ಸಿಎಂ ಅಶೋಕ್ ಗೆಹ್ಲೋಟ್ ಇಬ್ಬರನ್ನೂ ಅಭಿನಂದಿಸಿದ್ದಾರೆ.
ಪ್ರಹ್ಲಾದ್ ಸಿಂಗ್ ಮತ್ತು ಶಕ್ತಿ ಸಿಂಗ್
ಕೃಷಿಕರಾದ ಪ್ರಹ್ಲಾದ್ ಸಿಂಗ್ ಹಾಗೂ ಶಕ್ತಿ ಸಿಂಗ್ ಅವರೇ ಹಂತಕರನ್ನು ಬೆನ್ನಟ್ಟುವ ಮೂಲಕ ಧೈರ್ಯ ಮೆರೆದವರು. ಕನ್ಹಯ್ಯ ಲಾಲ್ ಕೊಲೆ ಮಾಡಿದ ತತ್ಕ್ಷಣ ಹಂತಕರಾದ ಗೌಸ್ ಮೊಹಮ್ಮದ್ ಮತ್ತು ರಿಯಾಝ್ ಅಖ್ತಾರಿ ಮೋಟಾರ್ ಬೈಕ್ನಲ್ಲಿ ಪರಾರಿಯಾಗಲೆತ್ನಿಸಿದ್ದರು. ಹಂತಕರು ತಮ್ಮ ಊರಿನ ಮುಂದೆಯೇ ಪರಾರಿಯಾಗಲೆತ್ನಿಸಿದ ಬಗ್ಗೆ ಮಾಹಿತಿ ತಿಳಿದುಕೊಂಡ ಇಬ್ಬರು ಕೃಷಿಕರು ಅವರ ಜಾಡು ಹಿಡಿದು ಹೊರಟು ಹಂತಕರ ಪರಿಚಯ ಸಿಕ್ಕಿದ ಕೂಡಲೇ 35 ಕಿಮೀವರೆಗೆ ಬೆನ್ನಟ್ಟಿದ್ದರು. ಈ ಕುರಿತು ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡಿದ ಕೃಷಿಕ ಪ್ರಹ್ಲಾದ್ ಸಿಂಗ್, ಇಬ್ಬರು ಹಂತಕರು ಪರಾರಿಯಾಗಲೆತ್ನಿಸುತ್ತಿದ್ದ ಬಗ್ಗೆ ಪೊಲೀಸರಿಂದ ಮಾಹಿತಿ ಸಿಕ್ಕಿತು. ಕೂಡಲೇ ನಾವೂ ಕಣ್ಣಿಟ್ಟೆವು. ಹೆದ್ದಾರಿ ಪಕ್ಕದಲ್ಲಿ ನಾನೂ, ಶಕ್ತಿಸಿಂಗ್ ಇಬ್ಬರು ಚಹಾ ಕುಡಿಯುತ್ತಿರುವ ವೇಳೆ ಇಬ್ಬರು ಹಂತಕರು ಅತಿವೇಗದಲ್ಲಿ ಬೈಕ್ನಲ್ಲಿ ಹೋಗುತ್ತಿರುವುದು ಗೊತ್ತಾಯಿತು. ಕೂಡಲೇ ನಮ್ಮ ಮೋಟಾರ್ ಬೈಕ್ನ್ನು ಚಾಲೂ ಮಾಡಿ ಹಂತಕರ ಬೆನ್ನಟ್ಟಿ ಹೋದೆವು ಎಂದು ವಿವರಿಸಿದರು.
ಒಂದು ಹಂತದಲ್ಲಿ ಕೃಷಿಕರಿಬ್ಬರು ಹಂತಕರಿಂದ ಕೇವಲ 100 ಮೀಟರ್ ಅಂತರದಲ್ಲಿದ್ದರು. ಅವರ ಮೇಲೆ ದೊಡ್ಡದಾದ ಚೂರಿಯೊಂದನ್ನು ಎಸೆದೆವು. ಆದರೆ ಅದು ಗುರಿ ತಪ್ಪಿತ್ತು. ಆದಾಗ್ಯೂ ನಾವು ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆವು. ಮತ್ತು ಅವರ ಬಗ್ಗೆ ಎಲ್ಲಾ ಮಾಹಿತಿಗಳನ್ನು ನೀಡುತ್ತಿದ್ದೆವು ಎಂದರು.
ಹಂತಕರನ್ನು ಬೆನ್ನಟ್ಟಿ ಹೋದ ಈ ಇಬ್ಬರು ಕೃಷಿಕರು ನೀಡಿದ ಮಾಹಿತಿಗಳು ಹಂತಕರನ್ನು ಕ್ಷಿಪ್ರವಾಗಿ ಬಂಧಿಸಲು ಪೊಲೀಸರಿಗೆ ಸಾಕಷ್ಟು ನೆರವಾಗಿತ್ತು. ಇಬ್ಬರ ಧೈರ್ಯವನ್ನು ಮೆಚ್ಚಿ ಸಿಎಂ ಅಶೋಕ್ ಗೆಹ್ಲೋಟ್ ಅವರನ್ನು ಕೃಷಿಕರನ್ನು ಅಭಿನಂದಿಸಿದ್ದಾರೆ. ಇಬ್ಬರಿಗೂ ನಗದು ಪುರಸ್ಕಾರ ಮತ್ತು ಉದ್ಯೋಗಗಳನ್ನು ನೀಡಿ ಸರ್ಕಾರ ಅವರನ್ನು ಅಭಿನಂದಿಸಬೇಕು ಎಂಬುದಾಗಿ ಇದೇ ವೇಳೆ ಕೆಲವು ಸಾಮಾಜಿಕ ಸಂಘಟನೆಗಳು ಒತ್ತಾಯಿಸಿವೆ.