ಬೆಂಗಳೂರು, ಜು 06 (DaijiworldNews/MS): " ಹೌದು. ನಾನು ಲಕ್ಕಿಡಿಪ್ ಸಿಎಂ, ಏನೀಗ? ನಿಮ್ಮವರನ್ನೇ ಕೇಳಿ. ನಿಮ್ಮಲ್ಲೆಷ್ಟು ಲಕ್ಕಿಡಿಪ್ ಗಳಿದ್ದಾರೆ" ಎಂದು ಮಾಜಿ ಮುಖ್ಯಮಂತ್ರಿ ಆಡಳಿತ ಪಕ್ಷ ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, " ಹೌದು. ನಾನು ಲಕ್ಕಿಡಿಪ್ ಸಿಎಂ, ಏನೀಗ? ಈಗ ಪಟ್ಟದಲ್ಲಿ ಕೂತಿರುವ ನಿಮ್ಮ ಸಿಎಂ ಅವರೇನು ಚುನಾವಣೆಯಲ್ಲಿ ಜನಾದೇಶ ಪಡೆದ ಘೋಷಿತ ಮುಖ್ಯಮಂತ್ರಿಯಾ? ಅವರೂ ಲಕ್ಕಿಡಿಪ್ಪು ಎಂಬುದನ್ನು ಮರೆತರೆ ಹೇಗೆ? ಅಧಿಕಾರದ ನೆರಳೂ ಕಾಣದೆ ಬೆಂಗೆಟ್ಟಿದ್ದ ಬಿಜೆಪಿಗೆ ರಾಜ್ಯದಲ್ಲಿ ಕುರ್ಚಿರುಚಿ ತೋರಿಸಿದ ಅಂದಿನ 20:20 ಸರಕಾರದ ಡಿಸಿಎಂ ಆಗಿದ್ದ ನಿಮ್ಮವರನ್ನೇ ಕೇಳಿ. ನಿಮ್ಮಲ್ಲೆಷ್ಟು ಲಕ್ಕಿಡಿಪ್ʼಗಳಿದ್ದಾರೆ ಎಂಬುದನ್ನು ಅವರೇ ಹೇಳುತ್ತಾರೆ, ಸತ್ಯ ಸಾಕ್ಷಾತ್ಕಾರ ಮಾಡಿಸುತ್ತಾರೆ ಎಂದು ಲೇವಡಿ ಮಾಡಿದ್ದಾರೆ.
ಲಕ್ಕಿಡಿಪ್ ಸಿಎಂ ಎಂದರೆ ಅಪಮಾನವೇನೂ ಅಲ್ಲ ನನಗೆ. ಆಕಸ್ಮಿಕ ಮುಖ್ಯಮಂತ್ರಿ ಎಂದು ಅನೇಕ ಸಲ ಹೇಳಿದ್ದೇನೆ. ಆದರೆ, ʼಆಪರೇಷನ್ ಕಮಲದ ಸಿಎಂʼ ಎನ್ನುವುದಕ್ಕಿಂತಾ ಕೀಳಾ ಅದು? ಯಾವುದು ಮೇಲು? ಯಾವುದು ಕೀಳು? ಸ್ವಲ್ಪ ಹೇಳಿ ಎಂದು ಪ್ರಶ್ನಿಸಿದ್ದಾರೆ.
ಇನ್ನು, ಜಗತ್ತಿನ ಅಂಕುಡೊಂಕಿನ ಮಾತು ಹಾಗಿರಲಿ. ಪ್ರಧಾನಿಮಂತ್ರಿ ಸಂಚರಿಸಿದ ರಸ್ತೆಯನ್ನೇ ನೋಡಿದರೆ ಸಾಕು, ಅರಿವಾಗುತ್ತದೆ ನಿಮ್ಮ ಅಂಕೆಷ್ಟು, ಡೊಂಕೆಷ್ಟು!! ʼಮಿಷನ್ ದಕ್ಷಿಣ್ʼ ಮೂಲ ತಾತ್ಪರ್ಯ ಏನು? ಮೈಸೂರಿನಲ್ಲಿ ಯೋಗಾಸನ, ಹೈದರಾಬಾದ್ʼನಲ್ಲಿ ಮಂಥನ. ಅದರ ಮರ್ಮ ಅರಿಯದವರು ಯಾರೂ ಇಲ್ಲ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ನೀವು ಅಧಿಕಾರಕ್ಕೆ ಬಂದಿದ್ದೇ ಜೆಡಿಎಸ್ ಕೃಪೆಯಿಂದ. ಸ್ವಪಕ್ಷವನ್ನೇ ಒಡೆದು ನನ್ನ ಜತೆ ಬರಲು ರೆಡಿ ಇದ್ದ ಆ ನಿಮ್ಮ ನಾಯಕರನ್ನು ನಾನೇ ತಡೆಯದೇ ಇದ್ದಿದ್ದರೆ, ನೀವು ಮತ್ತು ನಿಮ್ಮ ಪಕ್ಷ ಆವತ್ತೇ ನಡು ನೀರಿನಲ್ಲಿ ಮುಳುಗಿಹೋಗುತ್ತಿದ್ದಿರಿ. ಅನುಮಾನ ಇದ್ದರೆ ಒಮ್ಮೆ ಅವರನ್ನೇ ಕೇಳಿ. ನನ್ನ ನಡುಕದ ಬಗ್ಗೆ ಆಮೇಲೆ ಮಾತನಾಡಿ ಎಂದು ಸವಾಲ್ ಹಾಕಿದ್ದಾರೆ.