ಬೆಂಗಳೂರು, ಜು 06 (DaijiworldNews/MS): ಸರಕಾರಿ ಪದವಿಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಇವರ ಗೌರವ ಸಂಭಾವನೆಯನ್ನು 'ಪರಿಷ್ಕರಣೆ' ಮಾಡಲಾಗಿದ್ದು, ₹9,000 ದಿಂದ ₹12,000 ಕ್ಕೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ 1,250ಕ್ಕೂ ಅಧಿಕ ಸರಕಾರಿ ಪದವಿಪೂರ್ವ ಕಾಲೇಜುಗಳಿದ್ದು, 3,267 ಅತಿಥಿ ಉಪನ್ಯಾಸಕರಿದ್ದಾರೆ. ಅವರಿಗೆ ಈ ಹಿಂದೆ ಮಾಸಿಕ 9 ಸಾವಿರ ರೂ. ಗೌರವಧನ ನೀಡಲಾಗುತ್ತಿತ್ತು. ಆದರೆ ಇದೀಗ ಇವರ ವೇತನ ₹12,000ಕ್ಕೆ ಏರಿಸಲಾಗಿದೆ. ಇದಲ್ಲದೆ ಪ್ರಸಕ್ತ ಸಾಲಿನಲ್ಲಿ ಉಪನ್ಯಾಸಕರ ಕೊರತೆ ನೀಗಿಸಲು '3,708 ಅತಿಥಿ ಉಪನ್ಯಾಸಕ'ರ ಸೇವೆಯನ್ನು ಪಡೆಯಲಾಗುತ್ತಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಪಿಯು ಕಾಲೇಜಿನ ಅತಿಥಿ ಉಪನ್ಯಾಸಕರಿಗೆ ಕಳೆದ ಐದಾರು ವರ್ಷದಿಂದ ಒಮ್ಮೆಯೂ ವೇತನ ಪರಿಷ್ಕರಣೆ ಮಾಡಿರಲಿಲ್ಲ. ಶೈಕ್ಷಣಿಕ ಕಾರ್ಯಭಾರದ ಆಧಾರದಲ್ಲಿ ತರಗತಿಗಳನ್ನು ನಡೆಸುವ ನಮಗೆ ಸರಕಾರದ ಕನಿಷ್ಠ ವೇತನ ನೀತಿಯಂತೆಯೂ ವೇತನ ಸಿಗುತ್ತಿಲ್ಲ. ಹೀಗಾಗಿ ಕನಿಷ್ಠ ತಿಂಗಳಿಗೆ 15ರಿಂದ 20 ಸಾವಿರ ರೂ. ಗೌರವಧನ ನೀಡಬೇಕು ಎಂಬ ಬೇಡಿಕೆಯನ್ನು ಅತಿಥಿ ಉಪನ್ಯಾಸಕರು ಸರಕಾರದ ಮುಂದಿಟ್ಟಿದ್ದರು. ಇದೀಗ ಇವರ ಬೇಡಿಕೆಗೆ ಸ್ಪಂದಿಸಿದ ಸರ್ಕಾರ ವೇತನ ಹೆಚ್ಚಳ ಮಾಡಿದೆ.