ಮುಂಬೈ, ಜು 06 (DaijiworldNews/MS): ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಯೋಲಾ ಪಟ್ಟಣದಲ್ಲಿ ನಾಲ್ವರು ಅಪರಿಚಿತ ವ್ಯಕ್ತಿಗಳ ತಂಡವು ಅಫ್ಘಾನಿಸ್ತಾನ ಮೂಲದ 35 ವರ್ಷದ ಮುಸ್ಲಿಂ ಸಮುದಾಯದ ಧಾರ್ಮಿಕ ಮುಖಂಡನನ್ನು ಗುಂಡಿಕ್ಕಿ ಹತ್ಯೆ ಮಾಡಿದೆ.
ಮುಂಬೈನಿಂದ ಸುಮಾರು 200 ಕಿಮೀ ದೂರದಲ್ಲಿರುವ ಯೋಲಾ ಪಟ್ಟಣದ ಎಂಐಡಿಸಿ ಪ್ರದೇಶದ ಪ್ಲಾಟ್ನಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಖ್ವಾಜಾ ಸಯ್ಯದ್ ಚಿಶ್ತಿ ಎಂದು ಗುರುತಿಸಲಾಗಿದ್ದು, ಯೋಲಾದಲ್ಲಿ 'ಸೂಫಿ ಬಾಬಾ' ಎಂದು ಜನಪ್ರಿಯತೆ ಗಳಿಸಿದ್ದು, ಹತ್ಯೆಯ ಹಿಂದಿನ ಉದ್ದೇಶ ತಿಳಿದುಬಂದಿಲ್ಲ.
ದಾಳಿಕೋರರು ಸೂಫಿ ಬಾಬಾ ಹಣೆಗೆ ಬಂದೂಕಿನಿಂದ ಗುಂಡು ಹಾರಿಸಿದ್ದು, ಇದರ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹತ್ಯೆ ಬಳಿಕ, ದುಷ್ಕರ್ಮಿಗಳು ಅಫ್ಘಾನ್ ಪ್ರಜೆ ಸೂಫಿ ಬಾಬಾ ಬಳಸುತ್ತಿದ್ದ ಎಸ್ಯುವಿಯನ್ನು ವಶಪಡಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ . ಯೋಲಾ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ ಮತ್ತು ಹಂತಕರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.