ಬೆಂಗಳೂರು,ಜು 05(DaijiworldNews/SM) ಭ್ರಷ್ಟಾಚಾರದ ವಿರುದ್ದ ಹಿಂದಿನ ಕಾಂಗ್ರೆಸ್ ಸರಕಾರಗಳು ನಿರ್ಲಕ್ಷ್ಯತೆ ವಹಿಸಿದ್ದರೆ, ನಮ್ಮ ಸರಕಾರ, ಎಡಿಜಿಪಿ ದರ್ಜೆಯ ಅಧಿಕಾರಿಯನ್ನು ಬಂಧಿಸಿ ದಿಟ್ಟತನ ತೋರಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಅವರು ಮಂಗಳವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡುತ್ತಾ, " ಪಿಎಎಸ್ಐ ಅಕ್ರಮ ಪರೀಕ್ಷಾ ತನಿಖಾ ವಿಷಯದಲ್ಲಿ, ಸರಕಾರ ಅತ್ಯಂತ ಪಾರದರ್ಶಕವಾಗಿ ನಡೆದು ಕೊಂಡಿದ್ದು ಪ್ರಕರಣದಲ್ಲಿ ಭಾಗಿಯಾದ ಯಾರನ್ನೇ ಆಗಲಿ ರಕ್ಷಿಸುವ ಪ್ರಶ್ನೆಯಿಲ್ಲ," ಎಂದು ಕಾಂಗ್ರೆಸ್ ಆರೋಪಗಳ ವಿರುದ್ಧ ಗುಡುಗಿದರು.
ಕಾಂಗ್ರೆಸ್ ಸರಕಾರದ ಅವಧಿಯಲ್ಲಿ, ಸಿಐಡಿಗೆ ವಹಿಸಲಾದ ಯಾವುದೇ ಪ್ರಕರಣಗಳು ತಾರ್ಕಿಕ ಅಂತ್ಯವನ್ನು ಕಾಣಲಿಲ್ಲ. ಎಫ್ಐಆರ್ ಆದ ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಹಾಕಲಿಲ್ಲ, ಆದರೆ ADGP ದರ್ಜೆಯ ಅಧಿಕಾರಿಯ ಬಂಧನ ನಡೆಸಿದ ನಮ್ಮ ಸರಕಾರದ ಬದ್ಧತೆಯ ಬಗ್ಗೆ ಕಾಂಗ್ರೆಸ್ ನಾಯಕರು ಗೂಬೇ ಕೂರಿಸುತ್ತಿದ್ದಾರೆ ಎಂದು ಆಪಾದಿಸಿದರು.
"ಪ್ರಾಮಾಣಿಕ ಹಾಗೂ ಪ್ರತಿಭಾವಂತ ಅಭ್ಯರ್ಥಿಗಳನ್ನು ವಂಚಿಸಿ, ಕೆಲವರು ಹಣಬಲ ಮತ್ತು ವಾಮಮಾರ್ಗದಿಂದ ಪೊಲೀಸ್ ಇಲಾಖೆಗೆ ಪ್ರವೇಶಿಸುವುದನ್ನು ತಡೆಗಟ್ಟಲು ದಿಟ್ಟ ನಿರ್ಧಾರ ತಳೆದ ಸರಕಾರದ ಪ್ರಯತ್ನಕ್ಕೆ ಪ್ರತಿಪಕ್ಷ ಕಾಂಗ್ರೆಸ್ ನಾಯಕರು, ಸಹಕಾರ ನೀಡುತ್ತಿಲ್ಲ ಆದರೆ ನಮ್ಮ ರಾಜೀನಾಮೆ ಕೇಳುತ್ತಿದ್ದಾರೆ" ಎಂದು ದೂರಿದರು.