ಮೈಸೂರು, ಜು 05 (DaijiworldNews/DB): ವರುಣ ಕ್ಷೇತ್ರವನ್ನು ತಂದೆ ಸಿದ್ದರಾಮಯ್ಯ ಅವರಿಗಾಗಿ ತ್ಯಾಗ ಮಾಡಲು ನಾನು ಸಿದ್ದನಿದ್ದೇನೆ. ಇತರ ಕ್ಷೇತ್ರಗಳಿಂದ ಸ್ಪರ್ಧಿಸುವ ಇರಾದೆಯಿಲ್ಲ ಎಂದು ವರುಣ ಕ್ಷೇತ್ರದ ಶಾಸಕ, ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರುಣಾ ಕ್ಷೇತ್ರದಲ್ಲಿ ತಂದೆ ಸ್ಪರ್ಧಿಸಿದರೆ ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಣಕ್ಕಿಳಿಯುತ್ತೇನೆ ಎಂಬುದು ಕೇವಲ ವದಂತಿ. ಅಂತಹ ಚಿಂತನೆ ನಾನು ಮಾಡಿಲ್ಲ. ನಾನು ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧೆಗಿಳಿಯುವುದಿಲ್ಲ. ಬದಲಾಗಿ ತಂದೆಯ ಗೆಲುವಿಗಾಗಿ ಶ್ರಮಿಸುತ್ತೇನೆ. ಅವರಿಗೆ ವಿವಿಧ ಕ್ಷೇತ್ರಗಳಿಂದಲೂ ಕಣಕ್ಕಿಳಿಯುವಂತೆ ಆಹ್ವಾನವಿದೆ. ಆದರೆ ಹೈಕಮಾಂಡ್ ಸೂಚನೆಯಂತೆ ಸಿದ್ದರಾಮಯ್ಯ ತಮ್ಮ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದರು.
ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಸಿದ್ದರಾಮೋತ್ಸವ ಕಾರ್ಯಕ್ರಮ ನಡೆಯುತ್ತಿದೆಯೇ ಹೊರತು ಇದು ಶಕ್ತಿಪ್ರದರ್ಶನಕ್ಕಾಗಿ ನಡೆಸುವ ಕಾರ್ಯಕ್ರಮವಲ್ಲ. ಇದು ಚುನಾವಣಾ ವರ್ಷದಂದೇ ಬಂದಿರುವುದು ಕಾಕತಾಳೀಯ. ಇದರಲ್ಲಿ ರಾಜಕೀಯ ಬೆರೆಸುವ ಅಗತ್ಯವಿಲ್ಲ. ವಿವಿಧ ಪಕ್ಷಗಳ ನಾಯಕರನ್ನು ಸೇರಿಸಿಕೊಂಡು ಕಾರ್ಯಕ್ರಮ ಮಾಡಿದರೆ ರಾಜಕೀಯವಾಗಿ ಅನಗತ್ಯ ಚರ್ಚೆಗಳು ನಡೆಯುತ್ತವೆ. ಹೀಗಾಗಿ ಕೇವಲ ಕಾಂಗ್ರರಸ್ ನಾಯಕರನ್ನೊಳಗೊಂಡು ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದು ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಸಿದ್ದರಾಮಯ್ಯ ಅವರು ಕಾಂಗ್ರೆಸ್ನ ಸಿಎಂ ಆಕಾಂಕ್ಷಿ ಎಂದು ತೋರಿಸಿಕೊಳ್ಳುವುದಕ್ಕಾಗಿ ಈ ಸಿದ್ದರಾಮೋತ್ಸವ ನಡೆಸಲಾಗುತ್ತಿದೆ ಎಂಬುದು ಊಹಾಪೋಹ ಎಂದವರು ಇದೇ ವೇಳೆ ಸ್ಪಷ್ಟಪಡಿಸಿದರು.