ನಾಗ್ಪುರ, ಜು 05(DaijiworldNews/MS): ಗೆಳತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಅಜಯ್ ಪರ್ಟೆಕಿ ಎಂಬ 28 ವರ್ಷದ ಯುವಕ ಸಾವನ್ನಪ್ಪಿದ್ದ ಘಟನೆ ನಾಗ್ಪುರದ ಸಾವೊನೆರ್ ನಲ್ಲಿ ನಡೆದಿದೆ.
ಪ್ರಾಥಮಿಕ ತನಿಖೆಯಲ್ಲಿ ಈತ ಹೃದಯಘಾತದಿಂದ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು, ಮೃತ ಯುವಕ ಯಾವುದೇ ಡ್ರಗ್ಸ್ ಸೇವಿಸಿರಲಿಲ್ಲ ಎಂದು ಹೇಳಲಾಗಿದೆ. ಸಂತ್ರಸ್ತನಿಗೆ ಕಳೆದೆರಡು ದಿನಗಳಿಂದ ಜ್ವರವಿತ್ತು ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಚಾಲಕನಾಗಿದ್ದ ಆತ ವೆಲ್ಡಿಂಗ್ ತಂತ್ರಜ್ಞರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದ.
ಪರ್ಟೆಕಿ ಮತ್ತು ಮಧ್ಯಪ್ರದೇಶದ ಛಿಂದವಾಡದ ನರ್ಸ್ ಆಗಿರುವ 23 ವರ್ಷದ ಯುವತಿಯೊಂದಿಗೆ ಕಳೆದ ಮೂರು ವರ್ಷಗಳಿಂದ ಪ್ರೇಮವಿತ್ತು. ಫೇಸ್ ಬುಕ್ ನಲ್ಲಿ ಭೇಟಿಯಾಗಿದ್ದ ಇವರ ಸ್ನೇಹ ಪ್ರೀತಿಗೆ ತಿರುಗಿತ್ತು. ಈ ವಿಚಾರ ಮನೆಯವರಿಗೂ ತಿಳಿದಿತ್ತು. ಶೀಘ್ರದಲ್ಲೇ ಇವರಿಬ್ಬರು ಮದುವೆಯಾಗಿ ಸತಿ ಪತಿಯಾಗುವವರಿದ್ದರು. ಆದರೆ ವಿಧಿಯಾಟ ಬೇರೆಯೇ ಇತ್ತು.
ಸಂಜೆ 4 ಗಂಟೆಗೆ ಜೋಡಿ ಲಾಡ್ಜ್ಗೆ ಭೇಟಿ ನೀಡಿ ತ್ತು ಸುಮಾರು ಅರ್ಧ ಗಂಟೆಯ ನಂತರ ಅವರು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿದ್ದರು. ಈ ವೇಳೆ ಪರ್ಟೆಕಿ ಏಕಾಏಕಿ ಹಾಸಿಗೆಯಲ್ಲಿ ಕುಸಿದು ಬಿದ್ದ ಕಾರಣ ಸಹಾಯಕ್ಕಾಗಿ ಲಾಡ್ಜ್ ಸಿಬ್ಬಂದಿಯನ್ನು ಕರೆದಿದ್ದು ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಾಗಲೇ ಯುವಕ ಮೃತಪಟ್ಟಿದ್ದಾನೆ.
ಸಾವೊನೆರ್ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ (ಎಪಿಐ) ಸತೀಶ್ ಪಾಟೀಲ್ ಈ ಬಗ್ಗೆ ಮಾಹಿತಿ ನೀಡುತ್ತಾ,“ಮೃತ ಯುವಕ ಡ್ರಗ್ಸ್ ಸೇವಿಸಿರುವುದಕ್ಕೆ ಯಾವುದೇ ಪುರಾವೆಗಳು ಸಿಕ್ಕಿಲ್ಲ. ಹೊಟೇಲ್ ರೂಂ ನಲ್ಲಿಯೂ ಪ್ಯಾಕೆಟ್ಗಳು ಪತ್ತೆಯಾಗಿಲ್ಲ. ಯುವತಿ ಕೂಡ ತನ್ನ ಸಮ್ಮುಖದಲ್ಲಿ ಏನನ್ನೂ ಸೇವಿಸಿಲ್ಲ ಎಂದು ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ, ವೈದ್ಯರು ಪ್ರಾಥಮಿಕ ವರದಿಯಲ್ಲಿ ಸಾವಿಗೆ ಹೃದಯಾಘಾತ ಕಾರಣ ಎಂದು ಉಲ್ಲೇಖವಾಗಿದೆ. ದೇಹದ ಅಂಗ ಮತ್ತು ರಕ್ತವನ್ನು ರಾಸಾಯನಿಕ ವಿಶ್ಲೇಷಣೆಗೆ ಕಳುಹಿಸಲಾಗುತ್ತಿದೆ ಎಂದಿದ್ದಾರೆ.
ಖ್ಯಾತ ಹೃದ್ರೋಗ ತಜ್ಞ ಡಾ.ಆನಂದ್ ಸಂಚೇತಿ ಅವರು ಲೈಂಗಿಕ ಸಮಯದಲ್ಲಿ ಹೃದಯ ಸ್ತಂಭನದಿಂದ ಸಾಯುವುದು ಅಪರೂಪ ಆದರೆ ಸಾಧ್ಯತೆ ಇದೆ. ಶ್ರಮದಾಯಕ ಚಟುವಟಿಕೆಗಳ ಸಮಯದಲ್ಲಿ ಹೃದಯ ಸ್ನಾಯುಗಳಿಗೆ ರಕ್ತ ಮತ್ತು ಆಮ್ಲಜನಕದ ಹೆಚ್ಚಿನ ಅವಶ್ಯಕತೆಯಿದೆ. ಇತ್ತೀಚೆಗೆ ಯುವಜನತೆಗೆ ರೋಗಲಕ್ಷಣ ಇಲ್ಲದ ಪರಿಧಮನಿಯ ಕಾಯಿಲೆಯು ಮಾರಕವಾಗಿ ಸಂಭವಿಸುತ್ತಿದ್ದು, 25 ವರ್ಷ ಮೇಲ್ಪಟ್ಟ ಯುವಕರು ಹೃದಯ ತಪಾಸಣೆ ಮಾಡುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.