ಗಾಂಧಿನಗರ, ಜು 05 (DaijiworldNews/DB): ಕೊರೊನಾ ಲಸಿಕೆ ಪ್ರಮಾಣಪತ್ರ ಜಗತ್ತನ್ನೇ ನಿಬ್ಬೆರಗಾಗಿಸಿದೆ. ಆದರೆ ನಮ್ಮನ್ನು ವಿರೋಧಿಸುವವರು ಮಾತ್ರ ಆ ಪ್ರಮಾಣಪತ್ರದಲ್ಲಿದ್ದ ನನ್ನ ಭಾವಚಿತ್ರದ ಮೇಲಷ್ಟೆ ಗಮನ ಹರಿಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿಯವರು ಲೇವಡಿ ಮಾಡಿದ್ದಾರೆ.
ಗಾಂಧಿನಗರದಲ್ಲಿ ಡಿಜಿಟಲ್ ಇಂಡಿಯಾ ವೀಕ್- 2022 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು. ಕೊರೊನಾ ನಿಯಂತ್ರಣಕ್ಕೆ ಲಸಿಕೆ ಪಡೆದ ಕೂಡಲೇ ಲಸಿಕೆ ಪಡೆದುಕೊಂಡವರಿಗೆ ಪ್ರಮಾಣಪತ್ರ ಆನ್ಲೈನ್ನಲ್ಲಿ ಲಭಿಸುವಂತೆ ಮಾಡಿದ ಭಾರತದ ಸಾಮರ್ಥ್ಯದ ಬಗ್ಗೆ ಇಡೀ ಜಗತ್ತು ಮಾತನಾಡುತ್ತಿತ್ತು. ಆದರೆ ನಮ್ಮಲ್ಲಿ ಕೆಲವರು ಅದರಲ್ಲಿ ಅಚ್ಚೊತ್ತಿದ್ದ ನನ್ನ ಫೋಟೋದ ಬಗೆಗಷ್ಟೇ ಗಮನವಿಟ್ಟಿದ್ದರು ಎಂದರು.
ಡಿಜಿಟಲ್ ಇಂಡಿಯಾ ಕಲ್ಪನೆಯು ಕೋವಿಡ್ ಸಮಯದಲ್ಲಿ ತುಂಬಾ ಪ್ರಯೋಜನಕ್ಕೆ ಬಂದಿದೆ. ಇದು ಜನರ ಜೀವನವನ್ನು ಸರಳಗೊಳಿಸಿರುವುದು ಮಾತ್ರವಲ್ಲ, ಪಾರದರ್ಶಕ ಸೇವೆ ಮತ್ತು ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸುವಲ್ಲಿಯೂ ಕೆಲಸ ಮಾಡಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಪ್ರತಿ ಲಸಿಕೀಕರಣದ ದಾಖಲೆಗಳನ್ನು ನಿರ್ವಹಣೆ ಮಾಡಿರುವುದಕ್ಕೆ ಇಡೀ ಜಗತ್ತೇ ನಮ್ಮ ಕಡೆಗೆ ಬೆರಗಿನಿಂದ ನೋಡಿತ್ತು. ದೇಶದ ಪ್ರತಿಯೊಬ್ಬರಿಗೂ ಲಸಿಕೆ ಸಿಗುವಂತೆ ಮಾಡಿರುವುದು ಮತ್ತು ಲಸಿಕೆ ಪಡೆದ ತತ್ಕ್ಷಣ ಪ್ರತಿಯೊಬ್ಬರ ಮೊಬೈಲ್ನಲ್ಲಿ ಲಸಿಕಾ ಪ್ರಮಾಣಪತ್ರ ಸಿಗುವಂತೆ ಮಾಡಿದ್ದು ಜಗತ್ತಿಗೇ ಆಶ್ಚರ್ಯದ ವಿಷಯವಾಗಿತ್ತು. ವಿಶ್ವದ ಯಾವುದೇ ರಾಷ್ಟ್ರಗಳಲ್ಲಿಯೂ ಈ ರೀತಿಯ ಕ್ಷಿಪ್ರ ಕಾರ್ಯ ಇರಲಿಲ್ಲ ಎಂದರು.
ಆನ್ಲೈನ್ ವಹಿವಾಟಿಗಾಗಿ ಯುಪಿಐ ಸಿಸ್ಟಮ್ ಜಾರಿಗೊಳಿಸಿದ ಮೇಲೆ ಸಣ್ಣ ಸಣ್ಣ ವ್ಯಾಪಾರಸ್ಥರಿಗೂ ಹಲವಾರು ರೀತಿಯ ಉಪಯೋಗವಾಗಿದೆ. ಆದರೆ ಅತಿ ಹೆಚ್ಚು ಕಲಿತಿದ್ದ ಕೇಂದ್ರದ ಮಾಜಿ ಸಚಿವರೊಬ್ಬರು ಸಣ್ಣ ವ್ಯಾಪಾರಸ್ಥರ ಬಳಿ ಮೊಬೈಲ್ ಇಲ್ಲದಿರುವುದರಿಂದ ಅವರಿಗೆ ಇದರಿಂದ ತುಂಬಾ ತೊಂದರೆಯಾಗಲಿದೆ ಎಂದೆಲ್ಲಾ ಮಾತನಾಡಿದ್ದರು ಎಂದು ಪಿ. ಚಿದಂಬರ್ ಹೆಸರು ಹೇಳದೆಯೇ ಪರೋಕ್ಷವಾಗೊ ಮೋದಿ ವಾಗ್ದಾಳಿ ನಡೆಸಿದರು.
ಅಭಿವೃದ್ದಿ ಹೊಂದುತ್ತಿರುವ ದೇಶ ಭಾರತದಲ್ಲಿ ಸುಮಾರು ಶೇ. 40ರಷ್ಟು ಹಣದ ವ್ಯವಹಾರಗಳು ಇಂದು ಡಿಜಿಟಲೀಕರಣದ ಮುಖಾಂತರವೇ ಆಗುತ್ತಿದೆ. ಅಲ್ಲದೆ ಇದು ಇಡೀ ವಿಶ್ವದಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿಯೂ ಇದೆ ಎಂದವರು ವಿವರಿಸಿದರು.