ನವದೆಹಲಿ, ಜು 05(DaijiworldNews/MS): ರಾಹುಲ್ ಗಾಂಧಿ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡಿದ ಆರೋಪದ ಮೇಲೆ ಜೀ ನ್ಯೂಸ್ನ ನಿರೂಪಕ ರೋಹಿತ್ ರಂಜನ್ ಅವರನ್ನು ದೆಹಲಿಯ ಅವರ ಮನೆ ಬಳಿ ಮಂಗಳವಾರ ಬೆಳಗ್ಗೆ ಬಂಧಿಸಲಾಗಿದೆ. ವಾಹಿನಿಯು ತಪ್ಪುದಾರಿಗೆಳೆಯುವಂತಹ ರಾಹುಲ್ ಗಾಂಧಿ ವೀಡಿಯೊ ಒಂದನ್ನು ಪ್ರಸಾರ ಮಾಡಿ, ಬಳಿಕ ಕ್ಷಮೆಯಾಚಿಸಿತ್ತು.
ರೋಹಿತ್ ರಂಜನ್ ಅವರು ತಮ್ಮ ಶೋನಲ್ಲಿ, ಕೇರಳದ ವಯನಾಡ್ನಲ್ಲಿರುವ ಕಾಂಗ್ರೆಸ್ ಕಚೇರಿಯ ಮೇಲೆ ನಡೆದ ದಾಳಿಯ ಕುರಿತು , "ಈ ಕೃತ್ಯವೆಸಗಿದವರು ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ, ಅವರನ್ನು ಕ್ಷಮಿಸಿ "ಎಂಬ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದು , ಆದರೆ ಇದನ್ನು ಉದಯಪುರದ ಘಟನೆಗೆ ಲಿಂಕ್ ಮಾಡಿ ಪ್ರಸಾರ ಮಾಡಲಾಗಿತ್ತು.
ಟಿವಿ ಚಾನೆಲ್ ಮತ್ತು ಆಂಕರ್ ವೀಡಿಯೊವನ್ನುತೋರಿಸಿದ ರೀತಿ, ಉದಯಪುರದಲ್ಲಿ ಕನ್ಹಯ್ಯಾ ಲಾಲ್ ಅವರನ್ನು ಕೊಂದವರು ಮಕ್ಕಳು ಮತ್ತು ಕ್ಷಮಿಸಬೇಕು ಎಂದು ರಾಹುಲ್ ಗಾಂಧಿ ಹೇಳುತ್ತಿರುವಂತೆ ತೋರುತ್ತಿದೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದರು.
ಮಂಗಳವಾರ ಬೆಳಗ್ಗೆ 6.16ಕ್ಕೆ ಟ್ವೀಟ್ ಮಾಡಿದ್ದ ರೋಹಿತ್ ರಂಜನ್, ‘‘ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ನನ್ನನ್ನು ಬಂಧಿಸಲು ಛತ್ತೀಸ್ ಗಢ ಪೊಲೀಸರು ನನ್ನ ಮನೆಯ ಹೊರಗೆ ನಿಂತಿದ್ದಾರೆ. ಇದು ಕಾನೂನಾತ್ಮಕವಾಗಿ ಸರಿಯೇ"' ಎಂದು ಪ್ರಶ್ನೆ ಮಾಡಿ, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಎಎಸ್ಪಿ ಗಾಜಿಯಾಬಾದ್ ಮತ್ತು ಎಡಿಜಿ ವಲಯ ಲಕ್ನೋ ಅವರಿಗೆ ಟ್ಯಾಗ್ ಮಾಡಿದ್ದರು.
ಛತ್ತೀಸ್ಗಢ ಪೊಲೀಸರು ನಿರೂಪಕ ರಂಜನ್ ನನ್ನು ಬಂಧಿಸಲು ಪ್ರಯತ್ನಿಸುತ್ತಿರುವಾಗಲೇ ಗಾಝಿಯಾಬಾದ್ನ ಪೊಲೀಸರು ರಂಜನ್ ನನ್ನು ಕರೆದೊಯ್ದಿದ್ದಾರೆ. ಛತ್ತೀಸ್ಗಢ ಪೊಲೀಸ್ ತಂಡದಿಂದ ರಂಜನ್ ಬಂಧನವಾಗುವುದನ್ನು ತಪ್ಪಿಸಲು ಗಾಝಿಯಾಬಾದ್ ಪೊಲೀಸರು ರಂಜನ್ ನನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.