ನವದೆಹಲಿ, ಜು 05 (DaijiworldNews/DB): ಅಮರಾವತಿ ಮೂಲದ ರಸಾಯನಶಾಸ್ತ್ರಜ್ಞ ಉಮೇಶ್ ಕೊಲೆ ಪ್ರಕರಣದ ಎಲ್ಲಾ ಏಳು ಆರೋಪಿಗಳನ್ನು ಎನ್ಐಎ ವಶಕ್ಕೆ ನೀಡಲಾಗಿದೆ.
ಆರೋಪಿಗಳನ್ನು ಅಮರಾವತಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಬಳಿಕ ಸೋಮವಾರ ನಾಲ್ಕು ದಿನಗಳ ಟ್ರಾನ್ಸಿಟ್ ರಿಮಾಂಡ್ ಹೋಂ ನೀಡಲಾಗಿತ್ತು. ಇದೀಗ ಎಲ್ಲಾ ಆರೋಪಿಗಳನ್ನು ಎನ್ಐಎ ವಶಕ್ಕೆ ಪಡೆದುಕೊಂಡಿದೆ. ಜುಲೈ 8 ರ ಮೊದಲು ಎಲ್ಲಾ ಆರೋಪಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು ಮುಂಬೈ ನ್ಯಾಯಾಲಯದ ಮುಂಜೆ ಹಾಜರುಪಡಿಸುವ ಸಾಧ್ಯತೆಯೂ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುದ್ದಸರ್ ಅಹ್ಮದ್ (22), ಶಾರುಖ್ ಪಠಾಣ್ (25), ಅಬ್ದುಲ್ ತೌಫಿಕ್ (24), ಶೋಯೆಬ್ ಖಾನ್ (22), ಅತಿಬ್ ರಶೀದ್ (22), ಯೂಸುಫ್ ಖಾನ್ (32) ಮತ್ತು ಮಾಸ್ಟರ್ ಮೈಂಡ್ ಶೇಖ್ ಇರ್ಫಾನ್ ಶೇಖ್ ರಹೀಮ್ ಬಂಧಿತ ಆರೋಪಿಗಳು. ಇನ್ನೊಬ್ಬ ಶಂಕಿತ ಆರೋಪಿ ಶಮೀಮ್ ಅಹ್ಮದ್ನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ವಿವಾದಾತ್ಮಕ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ಬೆಂಬಲಿಸಿ ಸಾಮಾಜಿಕ ತಾಣದಲ್ಲಿ ಪೋಸ್ಟ್ ಹಾಕಿದ್ದಕ್ಕೆ ಜೂನ್ 21 ರಂದು ರಾತ್ರಿ ವೇಳೆಗೆ ಆರೋಪಿಗಳು ಉಮೇಶ್ ಅವರನ್ನು ಚಾಕುವಿನಿಂದ ಇರಿದು ಕೊಂದಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.