ಬೆಂಗಳೂರು, ಜು 05 (DaijiworldNews/HR): ಪಿಎಸ್ಐ ಹಗರಣದ ಕುರಿತಾಗಿ ಸದನವನ್ನು ದಾರಿ ತಪ್ಪಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ತಕ್ಷಣ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಹಗರಣದ ಕುರಿತಾಗಿ ಸದನವನ್ನು ದಾರಿ ತಪ್ಪಿಸಿದ ಗೃಹ ಸಚಿವರು ಕೂಡಲೇ ರಾಜೀನಾಮೆ ಕೊಡಬೇಕು. ಈಗ ಅನೇಕರು ಜೈಲಲ್ಲಿ ಕೊಳೆಯುತ್ತಿದ್ದಾರೆ ಎಂದರು.
ಇನ್ನು ಪಿಎಸ್ಐ ನೇಮಕಾತಿಯಲ್ಲಿ ಯಾವುದೇ ಹಗರಣ ನಡೆದಿಲ್ಲ. ಎಲ್ಲವೂ ಪಾರದರ್ಶಕವಾಗಿದೆ ಎಂದು ಗೃಹ ಸಚಿವರು ಹೇಳಿದ್ದರು. ಆದರೆ ಇದೀಗ ಈ ಹಗರಣದಲ್ಲಿ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಬಂಧನವಾಗಿದ್ದು, ಅಕ್ರಮ ನಡೆದಿರುವುದನ್ನು ಗೃಹ ಸಚಿವರೇ ಒಪ್ಪಿಕೊಂಡಿದ್ದಾರ ಎಂದಿದ್ದಾರೆ.
ಅಕ್ರಮದಲ್ಲಿ ಭಾಗಿಯಾಗಿರುವ ಆರೋಪಿ ಮಾಗಡಿಯ ಅಭ್ಯರ್ಥಿಯನ್ನು ವಿಚಾರಣೆ ಮಾಡದಂತೆ ಯಾರು ಬೆಂಬಲವಾಗಿ ನಿಂತರು, ಆ ಅಭ್ಯರ್ಥಿಯನ್ನು ಬಿಟ್ಟು ಕಳುಹಿಸಿದ್ದು ಯಾಕೆ? ನಂತರ 20 ದಿನ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಿ ಮತ್ತೆ ಆತನನ್ನು ವಿಚಾರಣೆಗೆ ಕರೆತಂದದ್ದು, ಅದರಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬುದು ಬಹಿರಂಗವಾಗಬೇಕು ಎಂದೂ ಆಗ್ರಹಿಸಿದ್ದಾರೆ.