ಬೆಂಗಳೂರು, ಜು 04 (DaijiworldNews/MS): ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಮೃತ್ ಪೌಲ್ ರನ್ನು ಸಿಐಡಿ ಬಂಧಿಸಿದ ವಿಚಾರಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಶ್ಲಾಘನೆ ವ್ಯಕ್ತಪಡಿಸಿದ್ದು, ಇನ್ನು ಸಿಐಡಿ ಸಾಗಬೇಕಿರುವ ದೂರ ಬಹಳಷ್ಟಿದೆ, ಕಿಂಗ್ ಪಿನ್ ಗಳ ಬಂಧನವಾಗಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ " ಪಿಎಸ್ಐ ಹಗರಣದ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆಳೆದು, ಇಂದು ಎಡಿಜಿಪಿ ದರ್ಜೆಯ ಉನ್ನತ ಅಧಿಕಾರಿಯನ್ನೇ ಬಂಧಿಸಿರುವ ಘಟನೆ ರಾಜ್ಯ ಪೊಲೀಸ್ ವ್ಯವಸ್ಥೆಯಲ್ಲೇ ಐತಿಹಾಸಿಕ. ಸಿಐಡಿ ತನಿಖಾ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಇನ್ನು, ಪಿಎಸ್ಐ ಕರ್ಮಕಾಂಡದ ತನಿಖೆಯಲ್ಲಿ ಸಿಐಡಿ ಸಾಗಬೇಕಿರುವ ದೂರ ಬಹಳಷ್ಟಿದೆ. ಕೆಳ, ಹಿರಿಯ ಹಂತದ ಅಧಿಕಾರಿಗಳ ಜತೆಗೆ ಸರಕಾರದ ಮಟ್ಟದಲ್ಲಿ ಅತ್ಯಂತ ಪ್ರಭಾವೀ ಸ್ಥಾನಗಳಲ್ಲಿರುವ ಕಿಂಗ್ ಪಿನ್ ಗಳನ್ನು ಸಿಐಡಿ ಹಿಡಿಯಬೇಕಿದೆ. ಯಾವುದೇ ಕಾರಣಕ್ಕೂ ಈ ಪ್ರಭಾವಿಗಳು ತಪ್ಪಿಸಿಕೊಳ್ಳಬಾರದು ಎಂದು ಹೇಳಿದ್ದಾರೆ.
ನಾನು ಮೊದಲೇ ಹೇಳಿದ್ದೆ. ಪಿಎಸ್ಐ ಹಗರಣದಲ್ಲಿ ಒಬ್ಬರು ಮಹಾನ್ ಕಿಂಗ್ ಪಿನ್ ಇದ್ದಾರೆ. ಅವರ ಹೆಸರು ಹೇಳಿದರೆ ಸರಕಾರವೇ ಬಿದ್ದು ಹೋಗುತ್ತದೆ. ಹೀಗೆ ಹೇಳಿದಾಗ ಕುಮಾರಸ್ವಾಮಿ ಹಿಟ್ ಅಂಡ್ ರನ್ ಮಾಡ್ತಾರೆ ಎಂದಿದ್ದರು. ದಾಖಲೆ ಕೊಡಿ ಎಂದಿದ್ದರು. ಈಗ ಅವರು ಏನು ಹೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.