ನವದೆಹಲಿ, ಜು 04 (DaijiworldNews/MS): 2015 ರ UPSC ಬ್ಯಾಚ್ನ ಎರಡನೇ ಅಗ್ರಸ್ಥಾನಿ ಮತ್ತು ಐಎಎಸ್ ಟೀನಾ ದಾಬಿ ಅವರ ಮಾಜಿ ಪತಿ, ಶ್ರೀನಗರ ಮುನ್ಸಿಪಲ್ ಕಾರ್ಪೊರೇಷನ್ ಕಮಿಷನರ್ ಅಥರ್ ಅಮೀರ್ ಖಾನ್ ಎರಡನೇ ಮದುವೆಯಾಗಲಿದ್ದಾರೆ. ಅಥರ್ ಖಾನ್ ಅವರು ತಮ್ಮ ಭಾವಿ ಪತ್ನಿ ಡಾ.ಮಹ್ರೀನ್ ಖಾಜಿ ಅವರೊಂದಿಗೆ ಉಂಗುರ ಬದಲಾಯಿಸಿಕೊಂಡಿದ್ದಾರೆ. ಅಥರ್ ಖಾನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಡಾ ಮೆಹ್ರೀನ್ ಖಾಜಿ ಅವರೊಂದಿಗಿನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ಜೈಪುರದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಐಎಎಸ್ ಅಧಿಕಾರಿ ಡಾ.ಪ್ರದೀಪ್ ಗವಾಂಡೆ ಅವರನ್ನು ಐಎಎಸ್ ಅಧಿಕಾರಿ ಟೀನಾ ದಾಬಿ ವಿವಾಹವಾದ ತಿಂಗಳ ನಂತರ ಅಥರ್ ಖಾನ್ ನಿಶ್ಚಿತಾರ್ಥದ ಸುದ್ದಿ ಹೊರಬಿದ್ದಿದೆ.
ಡಾ ಮೆಹ್ರೀನ್ ಕೂಡಾ ಶ್ರೀನಗರದಲ್ಲಿ ವಾಸಿಸುತ್ತಿದ್ದು, ದೆಹಲಿಯ ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿ ಉನ್ನತ ವ್ಯಾಸಂಗಕ್ಕಾಗಿ ಲಂಡನ್ ನಲ್ಲಿ ಮಾಡಿದ್ದರು. ಸದ್ಯ ನವದೆಹಲಿಯ ರಾಜೀವ್ ಗಾಂಧಿ ಕ್ಯಾನ್ಸರ್ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಮೆಡಿಕಲ್ ಮಾತ್ರವಲ್ಲದೆ ಫ್ಯಾಷನ್ ಇಂಡಸ್ಟ್ರಿಯಲ್ಲಿಯೂ ಸಕ್ರಿಯರಾಗಿದ್ದಾರೆ. ಮಹಿಳೆಯರಿಗೆ ಸಂಬಂಧಿಸಿದ ಬ್ರ್ಯಾಂಡ್ಗಳನ್ನು ಉತ್ತೇಜಿಸುತ್ತಿದ್ದಾರೆ. ಅವರು Instagram ನಲ್ಲಿ 2 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.
ಕಳೆದ ವರ್ಷ ಆಗಸ್ಟ್ನಲ್ಲಿ ಜೈಪುರದ ಕೌಟುಂಬಿಕ ನ್ಯಾಯಾಲಯವು ಮಾಜಿ ದಂಪತಿಗಳಾದ ಟೀನಾ ದಾಬಿ ಮತ್ತು ಅಥರ್ ಖಾನ್ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದರು .
ಟೀನಾ ದಾಬಿ ಅವರು 2015 ರಲ್ಲಿಸಿವಿಲ್ ಸೇವೆಗಳ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಮೊದಲನೇ ರ್ಯಾಂಕ್ ಪಡೆದಿದ್ದರೆ ಅಥರ್ ಖಾನ್ ಎರಡನೇ ಅಗ್ರಸ್ಥಾನಿಯಾಗಿದ್ದರು. ಪರಸ್ಪರ ಪ್ರೀತಿಸಿ 2018ರ ಎಪ್ರಿಲ್ನಲ್ಲಿ ಇಬ್ಬರೂ ದೆಹಲಿಯಲ್ಲಿ ವಿವಾಹವಾಗಿದ್ದರು.
ಅವರ ಮದುವೆಯ ಆರತಕ್ಷತೆಯಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೇಂದ್ರ ಸಚಿವರು ಮತ್ತು ಅಂದಿನ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಭಾಗವಹಿಸಿದ್ದರು.