ನವದೆಹಲಿ, ಜು 04 (DaijiworldNews/MS): ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದ ಕಾರಣದಿಂದ ಲೇಖಕಿ-ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರ ವಿರುದ್ದ ತೀವ್ರವಾದ ಆಕ್ರೋಶ ಕೇಳಿಬಂದಿದೆ. ಲೀನಾ ಮಣಿಮೇಕಲೈ ಅವರ ಸಾಕ್ಷ್ಯಚಿತ್ರದ ಪೋಸ್ಟರ್ ಪ್ರಕಟವಾದ ಬೆನ್ನಲ್ಲೇ #arrestleenamanimekalai ಎಂದು ಟ್ವಿಟರ್ನಲ್ಲಿ ಟ್ರೆಂಡಿಂಗ್ ಪ್ರಾರಂಭವಾಗಿದ್ದು, ಸಾಮಾಜಿಕ ಮಾಧ್ಯಮ ಮಾತ್ರವಲ್ಲದೇ ಸಾರ್ವಜನಿಕ ವಲಯದಲ್ಲೂ ತೀವ್ರವಾದ ವಿರೋಧ ವ್ಯಕ್ತವಾಗಿದೆ.
ಜುಲೈ 02 ರ ಶನಿವಾರ ಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರು ತಮ್ಮ ಸಾಕ್ಷ್ಯಚಿತ್ರ ಕಾಳಿಯ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಅವರ ಸಾಕ್ಷ್ಯಚಿತ್ರದ ಪೋಸ್ಟರ್ ಅನ್ನು ಹಂಚಿಕೊಳ್ಳುವುದರ ಜೊತೆಗೆ, ಕೆನಡಾ ಫಿಲ್ಮ್ಸ್ ಫೆಸ್ಟಿವಲ್ (ರಿದಮ್ಸ್ ಆಫ್ ಕೆನಡಾ) ನಲ್ಲಿ ಅವರ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ. ಅಗಾ ಖಾನ್ ಮ್ಯೂಸಿಯಂನಲ್ಲಿ ಇಂದು ನನ್ನ ಇತ್ತೀಚಿನ ಚಲನಚಿತ್ರದ ಬಿಡುಗಡೆಯನ್ನು ಹಂಚಿಕೊಳ್ಳಲು ಸೂಪರ್ ಥ್ರಿಲ್ ಆಗಿದೆ ಎಂದು ಬರೆದುಕೊಂಡಿದ್ದಾರೆ.
ಲೀನಾ ತಮ್ಮ ಸಾಕ್ಷ್ಯಚಿತ್ರಕ್ಕೆ ಕಾಳಿ ಎಂದು ಹೆಸರಿಟ್ಟಿದ್ದಾರೆ. ಅವರು ಹಂಚಿಕೊಂಡ ಪೋಸ್ಟರ್ನಲ್ಲಿ, ಕಾಳಿ ಮಾತೆಯ ಕೈಯಲ್ಲಿ ಸಿಗರೇಟ್ ಸೇದುತ್ತಿರುವುದನ್ನು ನೋಡಿದ ಸಾಮಾಜಿಕ ಮಾಧ್ಯಮ ಬಳಕೆದಾರರು ಆಕ್ರೋಶಗೊಂಡಿದ್ದಾರೆ. ಅಷ್ಟೇ ಅಲ್ಲ, ಈ ಪೋಸ್ಟರ್ನಲ್ಲಿ ಒಂದು ಕೈಯಲ್ಲಿ ತ್ರಿಶೂಲ ಮತ್ತು ಇನ್ನೊಂದು ಕೈಯಲ್ಲಿ ಎಲ್ಜಿಬಿಟಿಕ್ಯು ಕಮ್ಯೂನಿಟಿಯ (ಲೈಂಗಿಕ ಅಲ್ಪಸಂಖ್ಯಾತ ಸಮುದಾಯ) ಪ್ಲ್ಯಾಗ್ ಸಹ ಈ ಪೋಸ್ಟರ್ ನಲ್ಲಿ ಕಾಣಬಹುದಾಗಿದೆ.
ಈ ಪೋಸ್ಟರ್ ಕಾಣಿಸಿಕೊಂಡ ತಕ್ಷಣ, ಲೀನಾ ಮಣಿಮೇಕಲೈ ಅವರನ್ನು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಟ್ರೋಲ್ ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ.
ಕಾಳಿ ಸಾಕ್ಷ್ಯಚಿತ್ರದ ಪೋಸ್ಟರ್ ಅನ್ನು ನೋಡಿದ ಬಳಕೆದಾರರೊಬ್ಬರು “ಪ್ರತಿದಿನ ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆಯಾಗುತ್ತಿದೆ. ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಾರೆ ಎಂದು ಬರೆದುಕೊಂಡು ಅಮಿತ್ ಶಾ, ಪ್ರಧಾನಿಗೆ ಟ್ಯಾಗ್ ಮಾಡುವ ಮೂಲಕ ಬಳಕೆದಾರರು ಈ ಪೋಸ್ಟರ್ ಮತ್ತು ಚಿತ್ರದ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
2018 ರಲ್ಲಿ #MeToo ಚಳವಳಿಯ ಸಂದರ್ಭದಲ್ಲಿ ಲೀನಾಮಣಿಮೇಕಲೈ, ತಮಿಳು ಚಲನಚಿತ್ರ ನಿರ್ದೇಶಕ ಸುಸಿ ಗಣೇಶನ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿ ಸುದ್ದಿಯಾಗಿದ್ದರು.
ನೆಟ್ಟಿಗರ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ "ಒಂದು ಸಂಜೆ ಕಾಳಿ ಕಾಣಿಸಿಕೊಂಡಾಗ , ಹಾಗೂ ಟೊರೊಂಟೊದ ಬೀದಿಗಳಲ್ಲಿ ಅಡ್ಡಾಡಿದಾಗ ನಡೆಯುವ ಘಟನೆಗಳ ಸುತ್ತ ಚಿತ್ರವು ಸುತ್ತುತ್ತದೆ. ಈ ಚಿತ್ರ ನೋಡಿದ್ರೆ ಅರೆಸ್ಟ್ ಲೀನಾ ಮಣಿಮೇಕಲೈ ಎಂಬ ಹ್ಯಾಷ್ ಟ್ಯಾಗ್ ಹಾಕದೇ ಲವ್ ಯೂ ಲೀನಾ ಮಣಿಮೇಕಲೈ ಎಂಬ ಹ್ಯಾಷ್ ಟ್ಯಾಗ್ ಹಾಕಿ" ಎಂದು ಲೀನಾ ಬರೆದುಕೊಂಡಿದ್ದಾರೆ