ಪಟ್ನಾ, ಜು 04 (DaijiworldNews/MS): ಆರ್ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಭಾನುವಾರ ತಮ್ಮ ಪತ್ನಿ ರಾಬ್ರಿ ದೇವಿ ಅವರ ನಿವಾಸದಲ್ಲಿ ಮೆಟ್ಟಿಲುಗಳ ಮೇಲಿನಿಂದ ಜಾರಿ ಬಿದ್ದಿದ್ದು, ಅವರ ಭುಜದಲ್ಲಿ ಮುರಿತ ಉಂಟಾಗಿದ್ದು, ಬೆನ್ನಿಗೂ ಗಾಯಗಳಾಗಿವೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ವರದಿಗಳ ಪ್ರಕಾರ, ಪಾಟ್ನಾದ ಸರ್ಕ್ಯುಲರ್ ರಸ್ತೆಯ 10 ರಲ್ಲಿ ತಮ್ಮ ಪತ್ನಿ ರಾಬ್ರಿ ದೇವಿ ಅವರ ನಿವಾಸದಲ್ಲಿ ತಂಗಿದ್ದ ಲಾಲು ಯಾದವ್ ಅವರು ಮೆಟ್ಟಿಲುಗಳಿಂದ ಜಾರಿಬಿದ್ದು ಬಲ ಭುಜಕ್ಕೆ ಗಾಯವಾಗಿದೆ. ಮೆಟ್ಟಿಲುಗಳಿಂದ ಕೆಳಗೆ ಬರುತ್ತಿದ್ದಾಗ ಲಾಲು ಯಾದವ್ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗದೆ ಕೆಳಕ್ಕೆ ಬಿದ್ದ ಕಾರಣದಿಂದ ಗಾಯವಾಗಿದೆ.
ವಯೋಸಹಜವಾದ ಹಲವು ಆರೋಗ್ಯ ತೊಂದರೆಗಳಿಂದ ಬಳಲುತ್ತಿರುವ ಲಾಲು ಪ್ರಸಾದ್ ಅವರು ಕಿಡ್ನಿ ಸಮಸ್ಯೆಯ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲು ಸಿದ್ಧತೆ ನಡೆಸಿದ್ದರು.ಈ ಮಧ್ಯೆ ಅವಘಡ ಸಂಭವಿಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
'ಅವರ ಭುಜದಲ್ಲಿ ಮುರಿತವಾಗಿರುವುದು ಪರೀಕ್ಷೆಗಳಿಂದ ಗೊತ್ತಾಗಿದೆ. ಭುಜ ಹೊಂದಿಕೊಳ್ಳಲೆಂದು ಕ್ರೇಪ್ ಬ್ಯಾಂಡೇಜ್ ಅನ್ನು ಕಟ್ಟಲಾಗಿದೆ. ಕೆಲ ಔಷಧಿಗಳನ್ನು ನೀಡಿ ಮರಳಿ ಮನೆಗೆ ಕಳುಹಿಸಲಾಗಿದೆ' ಎಂದು ಅವರ ಆಪ್ತ ಸಹಾಯಕ ಮಾಹಿತಿ ನೀಡಿದ್ದಾರೆ
ಮೇವು ಹಗರಣದ ಹಲವು ಪ್ರಕರಣಗಳಲ್ಲಿ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿರುವ ಆರ್ಜೆಡಿ ಮುಖ್ಯಸ್ಥ ಲಾಲು ಅವರು ಕೆಲವು ತಿಂಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು