ಬೆಂಗಳೂರು, ಜು 03 (DaijiworldNews/HR): ರಾಜ್ಯ ಕಾಂಗ್ರೆಸ್ಸಿಗೆ ಅಧ್ಯಕ್ಷ ಯಾರು ಎನ್ನುವುದೇ ಈಗ ಯಕ್ಷ ಪ್ರಶ್ನೆ. ನನ್ನ ಉತ್ಸವಕ್ಕೆ ರಾಹುಲ್ ಬರುತ್ತಾರೆ ಎನ್ನುವ ಸಿದ್ದರಾಮಯ್ಯ, ರಾಹುಲ್ ಬರುವ ವಿಷಯವೇ ಗೊತ್ತಿಲ್ಲ ಎನ್ನುತ್ತಿರುವ ಡಿಕೆಶಿ. ಡಿಕೆಶಿಗೆ ಮಾಹಿತಿ ಇಲ್ಲದೆ ರಾಹುಲ್ ಬರುತ್ತಾರೆಯೇ? ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷರ ಬದಲಾವಣೆ ಸುಳಿವೇ ಇದು? ಎಂಬುದಾಗಿ ಬಿಜೆಪಿ ಪ್ರಶ್ನಿಸಿದೆ.
ಈ ಬಗ್ಗೆ ಸರಣಿ ಟ್ವಿಟ್ ಮಾಡಿರುವ ಕರ್ನಾಟಕ ಬಿಜೆಪಿ, ಡಿಕೆಶಿ ಅವರೇ, ಕೆಪಿಸಿಸಿ ಅಧ್ಯಕ್ಷರಾದ ನಿಮ್ಮ ಮಾತು ಮೀರಿ ಸಿದ್ದರಾಮೋತ್ಸವ ಮಾಡುತ್ತಿದ್ದಾರೆ ಎಂದಾದರೆ, ನಿಮ್ಮ ಸಂದೇಶ ತಲುಪುತ್ತಿಲ್ಲ ಅಥವಾ ನಿಮ್ಮ ಮಾತಿಗೆ ಬೆಲೆ ಇಲ್ಲ ಎಂದರ್ಥವಲ್ಲವೇ? ಎಂಬುದಾಗಿ ಡಮ್ಮಿ ಡಿಕೆಶಿ ಎಂಬುದಾಗಿ ವ್ಯಂಗ್ಯವಾಡಿದೆ.
ಇನ್ನು ಇತ್ತೀಚಿಗೆ ರಾಜಸ್ಥಾನದಲ್ಲಿ ಡಿಕೆಶಿ ಭಾಗವಹಿಸಿದ ಚಿಂತನ ಶಿಬಿರದಲ್ಲೂ, ಮೊನ್ನೆ ದೆಹಲಿಯಲ್ಲಿ ನಕಲಿ ಗಾಂಧಿಗಳ ಭೇಟಿ ಮಾಡಿದಾಗಲೂ, ಸಿದ್ದರಾಮಾತ್ಸವದ ಬಗ್ಗೆ ಯಾರೂ ಹೇಳಲಿಲ್ಲವೇ? ನಿಮ್ಮಿಬ್ಬರ ನಡುವೆ ಈಗ ಜೋಡೋ ಆಟವೋ ಅಥವಾ ತೋಡೋ ಆಟವೋ? ಎಂದು ಕೇಳಿದೆ.
ವಿಪಕ್ಷ ನಾಯಕ ಸಿದ್ಧರಾಮಯ್ಯ ಹುಟ್ಟುಹಬ್ಬ ಅದ್ದೂರಿಯಾಗಿ ನಡೆಯುತ್ತಿರುವುದು ಡಿಕೆ ಶಿವಕುಮಾರ್ ಅವ ರಿಗೆ ಗೊತ್ತಿಲ್ಲ ಎಂದಾದರೆ, ಪಕ್ಷದಲ್ಲಿ ಡಿಕೆಶಿ ಬೆನ್ನ ಹಿಂದೆ ನಡೆಯುತ್ತಿರುವುದು ಪಿತೂರಿಯಲ್ಲದೆ ಮತ್ತೇನು? ಪಕ್ಷದ ಅಧ್ಯಕ್ಷರಿಗೆ ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲದಷ್ಟು #ಡಮ್ಮಿಡಿಕೆಶಿ ಆಗಿದ್ದೇಕೆ? ಎಂದು ಪ್ರಶ್ನಿಸಿದೆ.