ಬೆಂಗಳೂರು, ಜು 03 (DaijiworldNews/HR): ಅಮೃತ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಆಗಸ್ಟ್ 11ರಿಂದ 17ರವರೆಗೆ 'ಹರ್ ಘರ್ ತಿರಂಗಾ' ಕಾರ್ಯಕ್ರಮವನ್ನು ಆಚರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, 'ಹರ್ ಘರ್ ತಿರಂಗಾ' ಅಭಿಯಾನದಡಿ ದೇಶದ ಮನೆಮನೆಯಲ್ಲೂ ರಾಷ್ಟ್ರಧ್ಜಜ ಹಾರಿಸಿ ರಾಷ್ಟ್ರಪ್ರೇಮ ಅಭಿವ್ಯಕ್ತಗೊಳಿಸಲು ಕರೆ ಕೊಡಲಾಗಿದ್ದು, ಇದಕ್ಕೆ ಪೂರಕವಾಗಿ, ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ಎಲ್ಲಾ ವಿಶ್ವವಿದ್ಯಾನಿಲಯಗಳು, ಡಿಸಿಟಿಇ ಗೆ ಒಳಪಡುವ ಸರ್ಕಾರಿ,ಅನುದಾನಿತ, ಅನುದಾನರಹಿತ ಪದವಿ ಕಾಲೇಜುಗಳು ಮತ್ತು ಡಿಪ್ಲೊಮಾ ಕಾಲೇಜುಗಳಿಗೆ ಇದು ಅನ್ವಯವಾಗುತ್ತದೆ ಎಂದು ತಿಳಿಸಿದ್ದಾರೆ.
ಇನ್ನು ತರಗತಿಗಳ ಸಮಯದಲ್ಲಿ ಈ ಬಗ್ಗೆ ತಿಳಿಸಬೇಕು, ಸೂಚನಾ ಫಲಕಗಳಲ್ಲಿ ಮಾಹಿತಿ ಹಾಕಬೇಕು, ಆಯಾ ಕಾಲೇಜುಗಳ ವಾಹನಗಳ ಮೇಲೆ ಧ್ವಜ ಅಳವಡಿಸಲು ತಿಳಿಸಬೇಕು ಎಂದಿದ್ದಾರೆ.
'ಹರ್ ಘರ್ ತಿರಂಗಾ' ಕಾರ್ಯಕ್ರಮದ ಬಗ್ಗೆ ಪ್ರತಿ ವಾರದ ಕೊನೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವೆಬ್ ಸೈಟ್ kanbahvblr@gmail.comಗೆ ಅಪ್ ಲೋಡ್ ಮಾಡಬೇಕು ಎಂದು ಸೂಚಿಸಲಾಗಿದೆ.