ಹೈದರಾಬಾದ್, ಜು 03 (DaijiworldNews/DB): ಮುಂದಿನ ಮೂರ್ನಾಲ್ಕು ದಶಕ ಬಿಜೆಪಿಯ ಯುಗವಾಗಲಿದೆ. ಭಾರತ ವಿಶ್ವಗುರು ಆಗುವುದು ನಿಶ್ಚಿತ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಹೈದರಾಬಾದ್ನಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ವಂಶಾಡಳಿತ, ಜಾತಿ ರಾಜಕಾರಣ ಮತ್ತು ತುಷ್ಟೀಕರಣ ನೀತಿಯಿಂದಾಗಿ ಜನ ಬೇಸತ್ತು ಹೋಗಿದ್ದಾರೆ. ಇವೆಲ್ಲವೂ ಶಾಪಗಳಾಗಿವೆ. ದೇಶ ಹಿಂದುಳಿಯಲು ಇವುಗಳು ಪ್ರಮುಖ ಕಾರಣವಾಗಿದೆ ಎಂದರು.
ಬಿಜೆಪಿ ಎಂದಿಗೂ ಅಭಿವೃದ್ದಿಪರ ರಾಜಕಾರಣವನ್ನೇ ಬಯಸುತ್ತದೆ. ದೇಶದ ಜನರೂ ಇದನ್ನೇ ಬಯಸುವುದು. ಹಾಗಾಗಿ ಎಲ್ಲಾ ಚುನಾವಣೆಗಳಲ್ಲಿಯೂ ಬಿಜೆಪಿ ಸರಣಿ ಜಯದೆಡೆಗೆ ಸಾಗುತ್ತಿದೆ. ಆ ಮೂಲಕ ಕುಟುಂಬ, ಜಾತಿ ರಾಜಕಾರಣಗಳು ದೇಶದಲ್ಲಿ ಅಂತ್ಯಗೊಳ್ಳುತ್ತಿವೆ ಎಂದು ತಿಳಿಸಿದರು.
ತೆಲಂಗಾಣ ಮತ್ತು ಪಶ್ಚಿಮ ಬಂಗಾಳದಲ್ಲಿರುವ ಕುಟುಂಬ ರಾಜಕಾರಣ ಕೂಡಾ ಸದ್ಯದಲ್ಲೇ ಕೊನೆಯಾಗಲಿದೆ. ಆಂಧ್ರ, ತಮಿಳುನಾಡು, ಇಡಿಶಾ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದವರು ಭವಿಷ್ಯ ನುಡಿದರು.