ಕೊಪ್ಪಳ, ಜು 03 (DaijiworldNews/DB): ಮಕ್ಕಳು ಮತ್ತು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡು ತಲೆ ಮರೆಸಿಕೊಂಡಿದ್ದ ಆರೋಪಿ ಶಿಕ್ಷಕನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.
ಶಿಕ್ಷಕ ಅಜರುದ್ದೀನ್ ಬಂಧಿತ ಆರೋಪಿ. ಕಾರಟಗಿ ಪೊಲೀಸರು ಭಾನುವಾರ ಬೆಳಗ್ಗೆ ಈತನನ್ನು ಗೋವಾ ಸಮೀಪ ವಶಕ್ಕೆ ಪಡೆದುಕೊಂಡಿದ್ದಾರೆ. ಕಾರಟಗಿ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ದ ದೂರು ದಾಖಲಾಗಿತ್ತು.
ಸಿಂಧನೂರಿನ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ ಈತ ಪಾಠ ಹೇಳಿಕೊಡುವ ನೆಪದಲ್ಲಿ ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ. ಅಲ್ಲದೆ ಗುಪ್ತಾಂಗ ಮುಟ್ಟಿ ಹಿಂಸೆ ನೀಡುತ್ತಿದ್ದ. ಅಮಾಯಕ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡು ವೀಡಿಯೋ ಮಾಡಿ ಇನ್ನಷ್ಟು ಮಹಿಳೆಯರನ್ನು ಒದಗಿಸಿಕೊಡುವಂತೆ ಬೆದರಿಕೆ ಹಾಕುತ್ತಿದ್ದ. ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ವೀಡಿಯೋ ವೈರಲ್ ಮಾಡುವುದಾಗಿಯೂ ಬ್ಲಾಕ್ ಮೇಲ್ ಮಾಡುತ್ತಿದ್ದ. ಹೀಗಾಗಿ ನೊಂದ ಮಹಿಳೆಯರು ಪೊಲೀಸ್ ದೂರು ನೀಡಿದ್ದರು.
ದೂರು ಆಧರಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಶು ಗಿರಿ ಅವರು ಪೊಲೀಸರ ವಿಶೇಷ ತಂಡ ರಚಿಸಿ ಆತನ ಬಂಧನಕ್ಕೆ ಕಳುಹಿಸಿದ್ದರು. ಈ ತಂಡವು ಆರೋಪಿಯನ್ನು ಗೋವಾದಲ್ಲಿ ಬಂಧಿಸಿದೆ.