ಪುಣೆ, ಜು 03 (DaijiworldNews/DB): ಮಹಾರಾಷ್ಟ್ರದ ಮಹಿಳಾ ಪೊಲೀಸ್ ಪೇದೆಗೆ ಕಚ್ಚಿ ಗಾಯಗೊಳಿಸಿದ ಸಂಬಂಧ ಕರ್ನಾಟಕ ಮೂಲದ ನಟಿಯೊಬ್ಬರನ್ನು ಬಂಧಿಸಲಾಗಿದೆ.
ವೆಬ್ ಸೀರೀಸ್ ನಲ್ಲಿ ನಟಿಸುತ್ತಿದ್ದ 28 ವರ್ಷದ ನಟಿ ಬಂಧನಕ್ಕೊಳಪಟ್ಟಿದ್ದಾರೆ. ಮುಂಬೈನ ಅಂಧೇರಿಯಲ್ಲಿ ವಾಸಿಸುತ್ತಿರುವ ನಟಿ ಕಾರ್ಯನಿಮಿತ್ತ ಪುಣೆಗೆ ತೆರಳಿದ್ದರು. ಇದಕ್ಕೂ ಮುನ್ನ ಪುಣೆಯ ಶೇರಿ ಪ್ರದೇಶದಲ್ಲಿರುವ ವಡಂಗಾವ್ ಹೊಟೇಲ್ನಲ್ಲಿ ಆನ್ಲೈನ್ ಮೂಲಕ ರೂಂ ಬುಕ್ ಮಾಡಿದ್ದರು. ಆದರೆ ಅಲ್ಲಿ ತೆರಳಿದಾಗ ಹೊಟೇಲ್ನಲ್ಲಿ ವ್ಯವಸ್ಥೆ ಸರಿಯಾಗಿಲ್ಲ ಎಂಬುದಾಗಿ ಕುಪಿತಗೊಂಡು ತಮ್ಮ ಹಣ ವಾಪಾಸ್ ನೀಡುವಂತೆ ಹೊಟೇಲ್ ಸಿಬಂದಿಗೆ ಆವಾಜ್ ಹಾಕಿದ್ದಾರೆ. ಈ ನಡುವೆ ಹೊಟೇಲ್ ಸಿಬಂದಿ ಮತ್ತು ನಟಿಯ ನಡುವೆ ವಾಗ್ವಾದ ನಡೆದಿದೆ.
ಕೂಡಲೇ ಹೊಟೇಲ್ ಸಿಬಂದಿ ಪೊಲೀಸ್ ಠಾಣೆಗೆ ಕರೆ ಮಾಡಿದ್ದು, ದಾಮಿನಿ ಸ್ಕ್ವಾಡ್ ಸ್ಥಳಕ್ಕೆ ಬಂದಿದೆ. ಈ ವೇಳೆ ಸಮಸ್ಯೆ ಬಗೆಹರಿಸಲು ಪೊಲೀಸರು ಯತ್ನಿಸಿದ್ದಾರೆ. ಆಗ ಮಹಿಳಾ ಪೊಲೀಸ್ ಪೇದೆಯೊಬ್ಬರ ಕೈಗೆ ನಟಿ ಕಚ್ಚಿ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಪೇದೆ ಪರ್ವೀನ್ ಶೇಖ್ ಚಂದನ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಮತ್ತು ಹಲ್ಲೆ ನಡೆಸಿದ ಆರೋಪದಲ್ಲಿ ಇದೀಗ ನಟಿಯನ್ನು ಪೊಲೀಸರು ಬಂಧಿಸಿದ್ದಾರೆ.