ಬೆಂಗಳೂರು, ಜು 03 (DaijiworldNews/DB): ತನ್ನನ್ನು ಗುರಾಯಿಸಿದ ಎಂಬ ಕಾರಣಕ್ಕೆ ಅಣ್ಣ ತಮ್ಮನನ್ನು ಚಾಕುವಿನಿಂದ ಇರಿದು ಕೊಂದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬಾಲು (25) ಕೊಲೆಯಾದ ವ್ಯಕ್ತಿ. ಆತನ ಅಣ್ಣ ರಾಮಕೃಷ್ಣ ಕೊಲೆ ಆರೋಪಿ. ಕೆ.ಆರ್ ಪುರಂ ಠಾಣಾ ವ್ಯಾಪ್ತಿಯ ಪ್ರಿಯಾಂಕ ನಗರದಲ್ಲಿ ಘಟನೆ ನಡೆದಿದೆ. ಗುರಾಯಿಸಿ ನೋಡಿದ ಎಂಬ ಕಾರಣಕ್ಕೆ ಬಾಲುವಿನೊಂದಿಗೆ ರಾಮಕೃಷ್ಣ ಜಗಳ ಕಾಯ್ದಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ಅಡುಗೆ ಮನೆಯಿಂದ ಚಾಕು ತಂದು ರಾಮಕೃಷ್ಣ ತಮ್ಮ ಬಾಲುವಿನ ಹೊಟ್ಟೆಗೆ ಇರಿದಿದ್ದಾನೆ. ಇರಿತದಿಂದ ಗಂಭೀರ ಗಾಯಗೊಂಡ ಬಾಲು ಸಾವನ್ನಪ್ಪಿದ್ದಾನೆ.
ಅಣ್ಣ ಮತ್ತು ತಮ್ಮನ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಈ ಹಿಂದೆಯೂ ಆತ ಅನೇಕ ಬಾರಿ ತಮ್ಮ ಬಾಲುನನ್ನು ಕೊಲ್ಲಲು ಯತ್ನಿಸಿದ್ದ ಎನ್ನಲಾಗಿದೆ. ಆದರೆ ಈ ಬಾರಿ ಗುರಾಯಿಸಿದ ಎಂಬ ಸಣ್ಣ ಕಾರಣವನ್ನೇ ಹಿಡಿದುಕೊಂಡು ತಮ್ಮನ ಜೀವವನ್ನು ತೆಗೆದಿದ್ದಾನೆ. ಕೊಲೆ ಮಾಡಿದ ಬಳಿಕ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.