ಬೆಂಗಳೂರು, ಜು 02 (DaijiworldNews/DB): ಸಿದ್ದರಾಮಯ್ಯನವರು ರಾಜ್ಯದ ಯಾವುದೇ ಕ್ಷೇತ್ರದಿಂದ ಬೇಕಿದ್ದರೂ ಗೆದ್ದು ಬರುವ ಶಕ್ತಿ ಹೊಂದಿದ್ದಾರೆ. ಆದರೆ ಬಿಜೆಪಿಯಲ್ಲಿ ಅಂತಹ ಒಬ್ಬ ನಾಯಕರಿರುವರೇ ಎಂದು ಕಾಂಗ್ರೆಸ್ ಬಿಜೆಪಿಯನ್ನು ಪ್ರಶ್ನಿಸಿದೆ.
ಈ ಬಗ್ಗೆ ಸರಣಿ ಟ್ವಿಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ರಾಜ್ಯದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂಬ ವಿಷಯವನ್ನರಿತ ಬಿಜೆಪಿ ಕನಲಿ ಹೋಗಿದೆ. ಮೂಲೆಗುಂಪಾದ ಬಿಎಸ್ವೈ ಅವರ ಬಗ್ಗೆ ಸ್ವಲ್ಪವಾದರೂ ಅನುಕಂಪ ಉಳಿಸಿಕೊಳ್ಳಿ ಎಂದು ವ್ಯಂಗ್ಯವಾಡಿದೆ.
ಉದಯಪುರದ ಹಂತಕರು ಬಿಜೆಪಿ ನಾಯಕರೊಂದಿಗೆ ಗುರುತಿಸಿಕೊಂಡಿದ್ದರು. ಬಿಜೆಪಿ ಅಲ್ಪಸಂಖ್ಯಾತ ಘಟಕದ ನಾಯಕ ಇರ್ಷಾದ್ ಚೈನ್ವಾಲಾ ಜೊತೆಗೆ ನಿಕಟ ಸಂಪರ್ಕದಲ್ಲಿದ್ದರು. ಬಿಜೆಪಿ ಕಾರ್ಯಕ್ರಮಗಳಿಗೆ ಕಾಯಂ ಆಗಿ ಹಾಜರಿರುತ್ತಿದ್ದರು. ಈ ವಿಷಯಗಳು ಬಿಜೆಪಿಯ ಷಡ್ಯಂತ್ರದ #Toolkit ಕೊಲೆ ಎಂಬ ಸಂಶಯಕ್ಕೆ ಪುರಾವೆ ಒದಗಿಸುತ್ತಿವೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕೊಳಕುಬಾಯಿ ಈಶ್ವರಪ್ಪನವರು ಕರ್ನಾಟಕದ ನೂಪುರ್ ಶರ್ಮಾ. 40% ಕಮಿಷನ್, ಸಂತೋಷ್ ಆತ್ಮಹತ್ಯೆ, ತಿರಂಗಾ ಬದಲಾವಣೆ, ಹಿಂಸೆಗೆ ಪ್ರಚೋದನೆ ಸೇರಿದಂತೆ ಈಶ್ವರಪ್ಪನವರನ್ನು ಬಂಧಿಸಲು ಹಲವು ಪ್ರಕರಣಗಳಿವೆ. ಹೀಗಿದ್ದೂ ಬಂಧಿಸದಿರುವುದೇಕೆ? ಹೆಣ ಬಿದ್ದಷ್ಟೂ ಓಟು ಬೀಳುತ್ತವೆ ಎಂಬ ನೀಚ ಚಿಂತನೆಯ ಬಿಜೆಪಿಯಿಂದ ದೇಶದ ಸ್ವಾಸ್ತ್ಯಕ್ಕೆ ಉಳಿಗಾಲವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.