ಕೋಲಾರ, ಜು 02 (DaijiworldNews/DB): ನಾನು ಸದ್ಯಕ್ಕೆ ಯಾವುದೇ ಪಕ್ಷ ಸೇರುವುದಿಲ್ಲ. ಆದರೆ ನನಗೆ ಮತ ನೀಡಿದ ಜನರ ತೀರ್ಮಾನಕ್ಕೆ ಆ ನಿರ್ಣಯವನ್ನು ಬಿಡುತ್ತೇನೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ.
ತಮ್ಮ ನಿವಾಸದ ಆವರಣದಲ್ಲಿ ಶನಿವಾರ ಬೆಂಬಲಿಗರು ಹಾಗೂ ಕಾರ್ಯಕರ್ತರ ಸಭೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ರಾಜಕೀಯ ಜೀವನ ಅಂತಿಮವಾಗಿಲ್ಲ, ಬದಲಾಗಿ ಹೊಸ ಅಧ್ಯಾಯ ಈಗಷ್ಟೇ ಆರಂಭವಾಗಿದೆ. ಯಾವುದೇ ಪಕ್ಷವನ್ನು ಸದ್ಯ ಸೇರುವುದಿಲ್ಲ. ಸ್ವಲ್ಪ ದಿನ ಕಾದು ನೋಡುತ್ತೇನೆ ಎಂದರು.
ಕೆ.ಆರ್. ರಮೇಶ್ಕುಮಾರ್ ಶಕುನಿಯಿದ್ದಂತೆ. ದಾನಶೂರ ಕರ್ಣನಾಗಿಯೂ, ದುರ್ಯೋದನನಾಗಿಯೂ ಪಾತ್ರ ಮಾಡುವ ಕಲೆ ಅವರಿಗೆ ಸರಿಯಾಗಿ ಗೊತ್ತಿದೆ. ನನ್ನನ್ನು ಪಕ್ಷದಲ್ಲಿ ಮೂಲೆಗುಂಪು ಮಾಡುವುದು ಅವರ ಉದ್ದೇಶವಾಗಿತ್ತು. ಇದಕ್ಕಾಗಿ ಬೇರೆಯವರನ್ನೂ ಬಲಿ ಕೊಡುತ್ತಿದ್ದಾರೆ. ತಮ್ಮನ್ನು ಹೊರತುಪಡಿಸಿ ಬೇರೆ ಯಾರೂ ಈ ಕ್ಷೇತ್ರದಲ್ಲಿ ಮಂತ್ರಿಯಾಗಬಾರದು, ಬೆಳೆಯಬಾರದು ಎಂಬುದೇ ಅವರ ಉದ್ದೇಶ ಎಂದು ಇದೇ ವೇಳೆ ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿದವರನ್ನು ನನ್ನ ಬಳಿ ಪ್ರಸ್ತಾಪಿಸದೇ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಕಾಂಗ್ರೆಸ್ಗೆ ಸೇರಿಸಿಕೊಂಡಿದ್ದಾರೆ. ನನ್ನನ್ನು ಸೋಲಿಸಿದವರಿಗೆ ಇವರ ಪಕ್ಷದಲ್ಲಿ ಮಣೆ ಹಾಕುವ ಅಗತ್ಯ ಬೇಕಿತ್ತಾ ಎಂದು ಅವರು ಪ್ರಶ್ನಿಸಿದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬೆಂಬಲಿಸಿದವರನ್ನು ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಕಾಂಗ್ರೆಸ್ಗೆ ಕರೆತಂದಿದ್ದಾರೆ. ನನ್ನ ಬಳಿ ಪ್ರಸ್ತಾಪಿಸದೇ ಏಕೆ ಸೇರಿಸಿಕೊಂಡಿರಿ? ಒಂದು ಹಂತದಲ್ಲಿ ರಾಜಿಗೂ ಸಿದ್ಧನಿದ್ದ ನನಗೆ ಏಕೆ ಮಾಹಿತಿ ನೀಡಲಿಲ್ಲ. ನನ್ನ ಸೋಲಿಸಿದವರಿಗೆ ಏಕೆ ಮಣೆ ಹಾಕಿದಿರಿ? ಅವರ ಅಗತ್ಯ ಕಾಂಗ್ರೆಸ್ಗೆ ಬೇಕಿತ್ತಾ ಎಂಬುದನ್ನು ಕ್ಷೇತ್ರದ ಜನರಿಗೆ ವಿವರಿಸಬೇಕು' ಎಂದು ಆಗ್ರಹಿಸಿದರು.