ಬೆಂಗಳೂರು, ಜು 02 (DaijiworldNews/DB): ದೇವೇಗೌಡರು ಇನ್ನೆಷ್ಟು ವರ್ಷ ಇರುತ್ತಾರೆ, ಅವರ ಕಾಲ ಮುಗಿಯಿತೆಂಬುದಾಗಿ ಸಿದ್ದರಾಮಯ್ಯನವರ ಖಾಸಗಿ ಟೀಂನಲ್ಲಿ ಚರ್ಚೆಯಾಗಿರುತ್ತದೆ. ಅದನ್ನು ಬಾಯ್ತಪ್ಪಿ ರಾಜಣ್ಣ ವೇದಿಕೆ ಮೇಲೆ ಹೇಳಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಬೆಳೆಸಿದ್ದು ಜೆಡಿಎಸ್ ಕಾರ್ಯಕರ್ತರೇ ಹೊರತು ಕಾಂಗ್ರೆಸ್ ಕಾರ್ಯಕರ್ತರಲ್ಲ. ಅದನ್ನವರು ಅರ್ಥ ಮಾಡಿಕೊಳ್ಳಬೇಕು ಎಂದರು.
ಸಿದ್ದರಾಮಯ್ಯ ಹುಟ್ಟು ಹಬ್ಬ ಕೆಡಿಸಲು ಜೆಡಿಎಸ್ ಪ್ರಯತ್ನಿಸುತ್ತಿರುವುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಅದು ಅವರ ವೈಯಕ್ತಿಕ ಕಾರ್ಯಕ್ರಮವಾಗಿದ್ದು, ನನಗಾಗಲೀ, ನಮ್ಮ ಪಕ್ಷಕ್ಕಾಗಲೀ ಆ ಕಾರ್ಯಕ್ರಮದೊಂದಿಗೆ ಸಂಬಂಧವಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಭೀಷ್ಮಾಚಾರ್ಯರಿದ್ದಂತೆ. ಸಾವು ಅನ್ನೋದು ಅವರು ಬಯಸಿದಾಗಲೇ ಬರುತ್ತದೆ ಹೊರತು ಯಾರೋ ಆ ಬಗ್ಗೆ ಮಾತನಾಡಿದಾಗ ಅಲ್ಲ. ಭೀಷ್ಮಾಚಾರ್ಯರ ಗುಣ ಅವರಲ್ಲಿದೆ. ಅವರಿಗೆ ಭಗವಂತ ಶಕ್ತಿ ಕೊಟ್ಟಿದ್ದಾನೆ. ಜೆಡಿಎಸ್ನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕೆಂಬುದೇ ಅವರ ಮಹಾನ್ ಇಚ್ಛೆಯಾಗಿದೆ ಎಂದು ಇದೇ ವೇಳೆ ಎಚ್ಡಿಕೆ ತಿಳಿಸಿದರು.