ನವದೆಹಲಿ, ಜು 02 (DaijiworldNews/DB): ಹಿಂದೂ ದೇವತೆ ಕುರಿತ ಆಕ್ಷೇಪಾರ್ಹ ಟ್ವೀಟ್ಗೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧತನಾಗಿರುವ ಆಲ್ಟ್ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್ಗೆ ದೆಹಲಿ ನ್ಯಾಯಾಲಯವು ಜಾಮೀನು ನಿರಾಕರಿಸಿದೆ. ಅಲ್ಲದೆ ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆರೋಪಿಯನ್ನು ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸ್ನಿಗ್ಧಾ ಸರ್ವರಿಯಾ ಎದುರು ಶನಿವಾರ ಹಾಜರುಪಡಿಸಲಾಯಿತು. ಆತನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೊಪ್ಪಿಸುವಂತೆ ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಜಾಮೀನು ಕೋರಿ ಜುಬೇರ್ ಕೂಡ ಅರ್ಜಿ ಸಲ್ಲಿಸಿದ್ದ. ಆದರೆ ಪೊಲೀಸರ ಅರ್ಜಿ ಪುರಸ್ಕರಿಸಿದ ನ್ಯಾಯಾಲಯ ಆರೋಪಿಗೆ ಜಾಮೀನು ನೀಡಲು ನಿರಾಕರಿಸಿತು.
ತನ್ನ ಬಂಧನದ ಕಾನೂನು ಬದ್ದತೆ ಪ್ರಶ್ನಿಸಿ ಆತ ಕೋರ್ಟ್ನಲ್ಲಿ ಜಾಮೀನಿಗೆ ಮನವಿ ಮಾಡಿದ್ದ. ಶುಕ್ರವಾರ ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ಪೊಲೀಸರಿಂದ ಪ್ರತಿಕ್ರಿಯೆ ಕೇಳಿತ್ತು. ಆದರೆ ಪಾಕಿಸ್ತಾನ ಸೇರಿದಂತೆ ವಿದೇಶಗಳಿಂದ ಪಡೆದ ದೇಣಿಗೆ ಬಗ್ಗೆ ತನಿಖೆ ನಡೆಸುತ್ತಿರುವುದರಿಂದ ಜಾಮೀನು ನೀಡಬಾರದು ಎಂದು ಪ್ರಾಸಿಕ್ಯೂಶನ್ ಹೇಳಿತ್ತು.
ಹಿಂದೂ ದೇವತಗಳ ಬಗ್ಗೆ ಆಕ್ಷೇಪಾರ್ಹ ಟ್ವೀಟ್ ಮಾಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಜೂನ್ 27 ರಂದು ಜುಬೇರ್ನನ್ನು ದೆಹಲಿ ಪೊಲೀಸರು ಬಂಧಿಸಿದ್ದರು.