ನವದೆಹಲಿ, ಜು 02 (DaijiworldNews/DB): ಪೊಲೀಸ್ ಕಾನ್ಸ್ಟೇಬಲ್ ವೊಬ್ಬರು ಸರ್ವಿಸ್ ರಿವಾಲ್ವರ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ದೆಹಲಿಯ ವಾಯುವ್ಯ ಜಿಲ್ಲೆಯಲ್ಲಿ ನಡೆದಿದೆ.
ಪ್ರಶಾಂತ್ ವಿಹಾರ್ ಪೊಲೀಸ್ ಠಾಣೆಯ ಅಮನ್ದೀಪ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಕಾನ್ಸ್ಟೆಬಲ್. ಪೆಟ್ರೋಲ್ ಪಂಪ್ ಪ್ರದೇಶದ ಗೋಡೆಯೊಂದರ ಪಕ್ಕ ಪಾರ್ಕಿಂಗ್ ಮಾಡಲಾಗಿದ್ದ ಸ್ಯಾಂಟ್ರೊ ಕಾರಿನಲ್ಲಿ ಶವ ಪತ್ತೆಯಾಗಿದ್ದು, ಕೂಡಲೇ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿದಾಗ ಪೊಲೀಸ್ ಕಾನ್ಸ್ಟೇಬಲ್ ಅಮನ್ದೀಪ್ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿತ್ತು.
ಅಮನ್ದೀಪ್ ರಜೆಯಲ್ಲಿ ತೆರಳಿದ್ದರು ಎನ್ನಲಾಗಿದೆ. ಇದೀಗ ಅವರ ಮನೆಯವರಿಗೆ ಮಾಹಿತಿ ನೀಡಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.