ಬೆಂಗಳೂರು, ಜು 02 (DaijiworldNews/DB): ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರಿಗೆ ತಾಕತ್ತಿದ್ದರೆ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಈಗಲೇ ಘೋಷಣೆ ಮಾಡಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಸವಾಲ್ ಹಾಕಿದ್ದಾರೆ.
ಜೆಡಿಎಸ್ ಕಚೇರಿ ಜೆ.ಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಜೆಡಿಎಸ್ ಈಗಾಗಲೇ ಎಚ್.ಡಿ. ಕುಮಾರಸ್ವಾಮಿ ಅವರನ್ನು ಜೆಡಿಎಸ್ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದಾಗಿ ಘೋಷಣೆ ಮಾಡಿದೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ಇನ್ನೂ ಘೋಷಣೆ ಮಾಡದಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಉತ್ಸವವನ್ನು ಹಾಳು ಮಾಡಲು ದೇವೇಗೌಡರ ಬಗ್ಗೆ ಕೆಟ್ಟದಾಗಿ ಮಾತನಾಡಿರುವುದಾಗಿ ರಾಜಣ್ಣ ಇಂದು ಉಲ್ಟಾ ಹೊಡೆದಿದ್ದಾರೆ. ಹಾಗಾದರೆ ಶಿವಕುಮಾರ್ ಮತ್ತು ಸುರೇಶ್ ಸಿದ್ದರಾಮಯ್ಯ ಉತ್ಸವ ಹಾಳು ಮಾಡುವುದಕ್ಕೆ ಹೇಳಿದ್ರಾ? ನಾವು ಮಾಡಿದರೆ ಬಿ ಟೀಮ್, ನೀವೇ ಮಾಡಿದರೆ ಬಿ ಟೀಂ ಅಲ್ಲ ಎಂದರ್ಥವೇ ಎಂದರು.
ಜನತಾದಳ ಅಸ್ತಿತ್ವದಲ್ಲಿ ಇಲ್ಲ ಎನ್ನುವ ಅವರಿಗೆ ಜೆಡಿಎಸ್ ಮೇಲೆ ಭಯ ಯಾಕೆ? ಅಂದು ಸಿದ್ದರಾಮಯ್ಯ ಅವರನ್ನು ಡಿಸಿಎಂ ಮಾಡಿದ್ದು ಯಾರು? ನನ್ನನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಮಾಡಿದ್ದು ಯಾರು ಎಲ್ಲವೂ ಗೊತ್ತಲ್ಲವೇ? ದೇವೇಗೌಡರು ಕೇವಲ ಪಕ್ಷದ ಸ್ವತ್ತಲ್ಲ. ಇಡೀ ದೇಶದ ಸ್ವತ್ತು ಎಂದರು.