ನವದೆಹಲಿ, ಜೂ 02 (DaijiworldNews/HR): ನೂಪುರ್ ಶರ್ಮಾಗೆ ಬೆಂಬಲ ನೀಡಿರುವ ಮಹಾರಾಷ್ಟ್ರದ ಮೆಡಿಕಲ್ ಶಾಪ್ವೊಂದರ ಮಾಲಕನ ಹತ್ಯೆ ಪ್ರಕರಣದ ತನಿಖೆಯನ್ನು ಎನ್ಐಎ ವಹಿಸಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಆದೇಶಿಸಿದ್ದಾರೆ.
ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್ ಬರೆದ ನಂತರ ಅಮರಾವತಿ ಮೂಲದ ಅಂಗಡಿ ಮಾಲೀಕ ಉಮೇಶ್ ಕೊಲ್ಹೆ ಅವರ ಹತ್ಯೆಯ ತನಿಖೆಯನ್ನು ಕೈಗೆತ್ತಿಕೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಷ್ಟ್ರೀಯ ತನಿಖಾ ಸಂಸ್ಥೆಗೆ ನಿರ್ದೇಶನ ನೀಡಿದ್ದು, ಇಅರ ಬೆನ್ನಲ್ಲೇ ಮಹಾ ಸಿಎಂ ಎನ್ಐಎ ತನಿಖೆಗೆ ವಹಿಸಿ ಆದೇಶಿಸಿದ್ದಾರೆ.
ಇನ್ನು ಉಮೇಶ್ ಅವರು ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಇದರಿಂದ ಕೆರಳಿದ್ದ ದುಷ್ಕರ್ಮಿಗಳು ಜೂನ್ 21ರಂದು ಉಮೇಶ್ ಕೊಲ್ಲೆ ಅವರನ್ನು ಹತ್ಯೆ ಮಾಡಿದ್ದಾರೆ. ಘಟನೆ ಸಂಬಂಧ ಪೊಲೀಸರು ಈಗಾಗಲೇ 7 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರ ಪೈಕಿ ಮುದಾಸಿನ್ ಅಹ್ಮದ್ ಹಾಗೂ ಶಾರೂಖ್ ಪಠಾಣ್ ಎಂಬಿಬ್ಬರು ಆರೋಪಿಗಳು ನೂಪುರ್ ಶರ್ಮಾರನ್ನು ಬೆಂಬಲಿಸಿದ್ದಕ್ಕೆ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ.