ಬೆಂಗಳೂರು, ಜೂ 02 (DaijiworldNews/HR): ಬಿಜೆಪಿ ಅಧಿಕಾರಕ್ಕೆ ಬಂದು 3 ವರ್ಷ ಮೀರಿದೆ. ಬೊಗಳೆ ಬಿಟ್ಟಿದ್ದು, ಸಮಾಜ ಒಡೆದಿದ್ದು ಬಿಟ್ಟರೆ ಮಾಡಿದ್ದೇನು? ರಾಷ್ಟ್ರೀಯ ಶಿಕ್ಷಣ ನೀತಿ ಎನ್ನುತ್ತೀರಿ, ಪಠ್ಯ ಪರಿಷ್ಕರಣೆ ಮಾಡಿದ್ದೀರಿ. ಶಿಕ್ಷಣ ಸಚಿವ ನಾಗೇಶ್ ಅವರೇ ಪಠ್ಯಕ್ಕೆ 'ಆಪರೇಷನ್ ಕಮಲ'ದ ಒಂದು ಅಧ್ಯಾಯವನ್ನೂ ಸೇರಿಸಬೇಕಿತ್ತು, ಭವ್ಯಭಾರತವನ್ನು ಬೆಳಗಲು! ಎಂದು ಸರ್ಕಾರದ ವಿರುದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಬಿಜೆಪಿ ಸರ್ಕಾರದ ಆಡಳಿತದಲ್ಲಿ ಕರ್ನಾಟಕದ ಸರ್ಕಾರಿ ಶಾಲೆಗಳ ದೃಶ್ಯವೈಭವ!! ನೋಡಿ 'ಮಾಳಿಗೆಗಳು ಸೋರುತ್ತಿವೆ. ಗೋಡೆಗಳು ಬಣ್ಣಗೆಟ್ಟಿವೆ. ಕಿಟಕಿ, ಬಾಗಿಲು ಹಾಳಾಗಿವೆ. ಕುಡಿಯಲು ನೀರಿಲ್ಲ. ಮಕ್ಕಳಿಗೆ ಶೌಚಾಲಯವೂ ಇಲ್ಲ. ಮಕ್ಕಳ ಜೀವಕ್ಕೆ ಗ್ಯಾರಂಟಿ ಇಲ್ಲ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ಬಣ್ಣಗೇಡು ವರಸೆಗೆ ಇದು ತಾಜಾ ಉದಾಹರಣೆ. ಹೇಳುವುದು ಒಂದು, ಮಾಡುವುದು ಇನ್ನೊಂದು. ಶಿಕ್ಷಣ ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರ ಸೃಷ್ಟಿಸಿರುವ ಅರಾಜಕತೆ ಮಕ್ಕಳ ಕಲಿಕೆಯಲ್ಲಿ ಅಲ್ಲೋಲಕಲ್ಲೋಲ ಎಬ್ಬಿಸಿದೆ. ಪಠ್ಯಕ್ಕೆ ಕೇಸರಿ ಬಳಿದು ಕತ್ತರಿ ಹಾಕುವ ಅಕ್ಷರದ್ರೋಹಿ ಬಿಜೆಪಿ ಸರಕಾರಕ್ಕೆ ಬಣ್ಣಗೆಟ್ಟ ಶಾಲೆಗಳ ಗೋಡೆಗಳೇ ಕಾಣುತ್ತಿಲ್ಲ ಎಂದಿದ್ದಾರೆ.
ಇನ್ನು ಪತ್ರಿಕೆಯೊಂದು ಬಿಜೆಪಿ ಸರ್ಕಾರದ ಗೋಮುಖವ್ಯಾಘ್ರ ಮುಖವನ್ನು ಬೆತ್ತಲುಗೊಳಿಸಿದೆ. ಸೋರುತ್ತಿರುವ ಶಾಲೆಗಳನ್ನು ಮುಖಕ್ಕೆ ರಾಚುವಂತೆ ತೋರಿಸಿದೆ. ರಾಜ್ಯದಲ್ಲಿ 75,675 ಶಾಲೆ ಕೊಠಡಿಗಳು ಶಿಥಿಲವಾಗಿವೆ. ಇಲ್ಲಿ ಶಿಥಿಲ ಆಗಿರುವುದು ಕರ್ನಾಟಕದ ಹೆಮ್ಮೆ ಎಂದರು.
224 ವಿಧಾನಸಭೆ ಕ್ಷೇತ್ರಗಳ 34 ಶೈಕ್ಷಣಿಕ ಜಿಲ್ಲೆಗಳಲ್ಲಿ ಲಕ್ಷಾಂತರ ಮಕ್ಕಳು ಜೀವ ಅಂಗೈಯಲ್ಲಿಟ್ಟುಕೊಂಡು ಕಲಿಯುತ್ತಿದ್ದಾರೆ. ಅವರಿಗೆ ಶಾಲೆಯೇ ಶಿಕ್ಷೆಯಾಗಿದೆ. ಶಿಕ್ಷಣ ಇಲಾಖೆ ಅದಕ್ಷತೆಯ ಕೂಪ ಎನ್ನುವುದಕ್ಕೆ ಇದೇ ಸಾಕ್ಷಿ. ಶಿಕ್ಷಣ ಸಚಿವರು, ಆ ಇಲಾಖೆಯ ಅಧಿಕಾರಿಗಳ ಪರಮ ಬೇಜವಾಬ್ದಾರಿಯ ಪರಾಕಾಷ್ಠೆ ಇದು ಎಂದು ಹೆಚ್ ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದುಬಾರಿ ಶುಲ್ಕ ತೆತ್ತು ಖಾಸಗಿ ಶಾಲೆಗಳಿಗೆ ಸೇರಲಾಗದ ಬಡ, ಮಧ್ಯಮವರ್ಗದ ಮಕ್ಕಳು ಸರಕಾರಿ ಶಾಲೆಗಳಲ್ಲೇ ವ್ಯಾಸಂಗ ಮಾಡುತ್ತಿದ್ದಾರೆ. ಈ ಮಕ್ಕಳ ಜೀವಕ್ಕೆ ಬೆಲೆ ಇಲ್ಲವೇ? ಹೇಳಿ ಶಿಕ್ಷಣ ಸಚಿವರೇ? ಎಂದು ಪ್ರಶ್ನಿಸಿದ್ದಾರೆ.
ಶಾಲೆಗಳ ಸುಸ್ಥಿತಿ, ಮಕ್ಕಳ ಸುರಕ್ಷತೆ ಬಗ್ಗೆ ಸುಮ್ಮನಿದ್ದೀರಿ. ಪಠ್ಯದ ಕತ್ತರಿಗೆ ಇರುವಷ್ಟು ಆತುರ ಶಾಲೆ ಕೊಠಡಿಗಳ ರಿಪೇರಿಗೆ ಯಾಕಿಲ್ಲ? ಇಲ್ಲಿ 40% ಕಮೀಷನ್ ವ್ಯವಹಾರ ಕುದುರಲಿಲ್ಲವೇ? ಭಾರತವನ್ನು #ವಿಶ್ವಗುರು ಮಾಡುವುದು ಎಂದರೆ ಹೀಗೇನಾ? ಹೇಳಿ ಮಾನ್ಯ ಶಿಕ್ಷಣ ಸಚಿವರೇ? ಎಂದು ಪ್ರಶ್ನಿಸಿದ್ದಾರೆ.
ತಕ್ಷಣವೇ ಸರ್ಕಾರ ಕ್ರಮ ವಹಿಸಬೇಕು. ಅಧಿಕಾರಿಗಳನ್ನು ಶಾಲೆಗಳಿಗೆ ಅಟ್ಟಿ ರಿಪೇರಿ ಕೆಲಸ ಮಾಡಿಸಿ ಎಲ್ಲ ಮೂಲಸೌಕರ್ಯ ಒದಗಿಸಬೇಕು. ಒಂದು ಮಗುವಿಗೆ ಅಪಾಯವಾದರೂ ಸುಮ್ಮನಿರುವ ಪ್ರಶ್ನೆ ಇಲ್ಲ. ಒಂದು ತಿಂಗಳೊಳಗೆ ಶಾಲೆಗಳು ಸರಿ ಆಗದಿದ್ದರೆ, ಸದನದ ಒಳಗೆ, ಹೊರಗೆ ಶಿಕ್ಷಣ ಸಚಿವರು ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.