ಸಕಲೇಶಪುರ, ಜು 02 (DaijiworldNews/DB): ಕಾಫಿ ತೋಟದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ದನೋರ್ವನ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ವೃದ್ದ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.
ಕೃಷ್ಣೇಗೌಡ (67) ಮೃತ ದುರ್ದೈವಿ. ತಾಲೂಕಿನ ಸುಂಡೆಕೆರೆ ಸಮೀಪದ ಕೆಲಗಳಲೆ ಗ್ರಾಮದಲ್ಲಿರುವ ತಮ್ಮ ಕಾಫಿ ತೋಟದಲ್ಲಿ ಕೃಷ್ಣೇಗೌಡ ಅವರು ಶನಿವಾರ ಮುಂಜಾನೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅವರ ಮೇಳೆ ಕಾಡಾನೆ ಎರಗಿದೆ. ಕಾಡಾನೆ ದಾಳಿಯಿಂದ ತೀವ್ರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹವನ್ನು ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ಸಾಗಿಸಲಾಯಿತು.
ಇನ್ನು ವೃದ್ದನನ್ನು ಕಾಡಾನೆ ತುಳಿದು ಸಾಯಿಸಿರುವುದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಾಡಾನೆ ದಾಳಿಯಿಂದ ಮುಕ್ತಿ ನೀಡುವಂತೆ ಆಗ್ರಹಿಸಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳಿಂದ ಬೃಹತ್ ಪ್ರತಿಭಟನೆಗೆ ತಯಾರಿ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.