ಕೊಡಗು, ಜು 02 (DaijiworldNews/DB): ಧಾರಾಕಾರ ಮಳೆಯಿಂದ ಭೂ ಕುಸಿತ ಉಂಟಾದ ಪರಿಣಾಮ ರಸ್ತೆಯಲ್ಲೇ ಮಣ್ಣು ಬಿದ್ದು ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ.
ಧಾರಾಕಾರ ಮಳೆಯಿಂದಾಗಿ ಮಡಿಕೇರಿ ತಾಲೂಕಿನ ಮದೆನಾಡು-ಜೋಡುಪಾಲ ನಡುವಿನ ರಸ್ತೆಗೆ ಮಣ್ಣು ಮತ್ತು ಮರಗಳು ಕುಸಿದು ಬಿದ್ದಿವೆ. ರಸ್ತೆಯಲ್ಲಿ ಭಾರೀ ಮಣ್ಣು ಬಿದ್ದಿದ್ದು, ಚರಂಡಿಗೆ ಮಣ್ಣು ಬಿದ್ದು ಮಣ್ಣು ತುಂಬಿರುವುದರಿಂದ ಚರಂಡಿ ನೀರು ಕೂಡಾ ರಸ್ತೆಯಲ್ಲಿ ಹರಿಯುತ್ತಿದ್ದು, ವಾಹನ ಸವಾರರಿಗೆ ಸಂಚರಿಸಲಾಗದೆ ಸಂಚಾರ ಸಂಕಟ ಎದುರಾಗಿದೆ. ಇದರೊಂದಿಗೆ ದಟ್ಟ ಮಂಜು ಕೂಡಾ ಈ ಭಾಗದಲ್ಲಿ ಆವರಿಸಿರುವುದರಿಂದ ಸಂಚಾರಕ್ಕೆ ದಾರಿಯೂ ಸರಿಯಾಗಿ ಕಾಣದೆ ಹೈರಾಣಾಗಿದ್ದಾರೆ. ಇದರಿಂದ ನಡೆದಾಡಲು ಕೂಡಾ ಪಾದಚಾರಿಗಳಿಗೆ ಕಷ್ಟವಾಗುತ್ತಿದೆ.
ಜಲಾವೃತಗೊಂಡ ಮನೆ
ಧಾರಕಾರ ಮಳೆಯಿಂದ ಸುಳ್ಯ ತಾಲೂಕಿನ ಸಂಪಾಜೆ ಬಳಿಯ ಗೂನಡ್ಕ ಗ್ರಾಮದ ಧರಣಿ ದಯಾನಂದ ಎಂಬುವರ ಮನೆ ಜಲಾವೃತವಾಗಿದೆ. ಸರಣಿ ಭೂಕಂಪದಿಂದ ಹೈರಾಣಾದ ಚೆಂಬು ಗ್ರಾಮದಲ್ಲಿ ಕೆಲವು ಮನೆಗಳ ಬಳಿ ಭೂಕುಸಿತ ಉಂಟಾಗಿದೆ. ಇಲ್ಲಿನ ಗಿರಿಧರ ಎಂಬವರ ಮನೆಗೆ ಮಣ್ಣು ಕುಸಿದು ಹಾನಿ ಉಂಟಾಗಿದೆ.